ದಲಿತರ ಬಗ್ಗೆ ಪ್ರೀತಿ ಇದ್ದರೆ ಖರ್ಗೆಯವರನ್ನು ಸಿಎಂ ಎಂದು ಘೋಷಿಸಿ: ಕಾಂಗ್ರೆಸ್ ಗೆ ನಳಿನ್ ಕುಮಾರ್ ಕಟೀಲ್ ಸವಾಲು
ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇಂದು ಚಿತ್ರದುರ್ಗದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದರು.
ಎರಡು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಅತ್ಯುತ್ತಮವಾದ ಆಡಳಿತವನ್ನು ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜೀವ, ಜೀವನ ಉಳಿಸುವ ಕೆಲಸವನ್ನು ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಮಾಡಿದೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.
ಚುನಾವಣೆಗೆ ಎರಡು ವರ್ಷಗಳಿರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಗೀತ ಕುರ್ಚಿ ಆರಂಭವಾಗಿದೆ. ಅದಲ್ಲದೆ ದಲಿತ ಮುಖ್ಯಮಂತ್ರಿ ಕುರಿತ ಚರ್ಚೆಯೂ ಆರಂಭವಾಗಿದೆ. ಕಾಂಗ್ರೆಸ್ಸಿಗರಿಗೆ ದಲಿತರ ಬಗ್ಗೆ ಪ್ರೀತಿ ಮತ್ತು ಅಭಿಮಾನ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿ ಎಂದು ನಳಿನ್‍ಕುಮಾರ್ ಅವರು ಸವಾಲೆಸೆದರು.
ಯಡಿಯೂರಪ್ಪ ಅವರು 45 ವರ್ಷಗಳ ಕಾಲ ರೈತಪರ ಹೋರಾಟ, ಪಾದಯಾತ್ರೆ ಮೂಲಕ ಪಕ್ಷವನ್ನು ಬೆಳೆಸಿದವರು. ಅವರಿಗೆ ಜನರ ಕಷ್ಟದ ಅರಿವಿದೆ. ಆದ್ದರಿಂದ ಅವರು ಜನಪರ ಆಡಳಿತ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಯಡಿಯೂರಪ್ಪ ಅವರ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಬಿಜೆಪಿ ಸಂಘಟನಾತ್ಮಕ ಚಿಂತನೆಗಳ ಆಧಾರದಲ್ಲಿ ಬಿಜೆಪಿ ಮುಂದಿನ ಬಾರಿ ರಾಜ್ಯದಲ್ಲಿ ಮತ್ತೆ ಸರಕಾರ ರಚಿಸಲಿದೆ. ಆದ್ದರಿಂದ ಕಾಂಗ್ರೆಸ್ಸಿಗರು ಮತ್ತು ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮತ್ತೆ ಸರಕಾರ ರಚಿಸುವ ಕನಸು ಕಾಣದಿರುವುದೇ ಒಳ್ಳೆಯದು ಎಂದರು.
ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಗಿಸುವ ತಂತ್ರ ಕಾಂಗ್ರೆಸ್‍ನಲ್ಲಿ ನಡೆಯುತ್ತಿದೆ. ಹಿಂದೆ ಗುರುಗಳಿಗೆ ಕೈಕೊಟ್ಟು ಹೊರಬಂದ ಸಿದ್ದರಾಮಯ್ಯ ಅವರು ಅಹಿಂದ ಚಳವಳಿ ಪ್ರಾರಂಭಿಸಿದರು. ಆದರೆ, ಮುಖ್ಯಮಂತ್ರಿಯಾದ ಬಳಿಕ ಹಿಂದುಳಿದ ವರ್ಗಗಳನ್ನೇ ಮರೆತರು. ಅವರಿಗೆ ನ್ಯಾಯ ಕೊಡಲಿಲ್ಲ. ದಲಿತ ಮುಖ್ಯಮಂತ್ರಿ ಚರ್ಚೆಯನ್ನು ಮುಚ್ಚಿ ಹಾಕಿದರು ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ಅವರು ಚುನಾವಣೆಗೆ ನಿಂತಾಗ ಸೋಲಿಸಿದ, ಅವರ ಶವಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡದ ಕಾಂಗ್ರೆಸ್ಸಿಗರು ದಲಿತರ ಅಭ್ಯುದಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅಂಬೇಡ್ಕರರ ಪಂಚತೀರ್ಥಗಳಿಗೆ ರಕ್ಷಣೆ ನೀಡಿ ಅವುಗಳ ಅಭಿವೃದ್ಧಿ ಮಾಡಿದ್ದರೆ ಅದು ಬಿಜೆಪಿಯ ನರೇಂದ್ರ ಮೋದಿ ಅವರ ಸರಕಾರ. ಕಾಂಗ್ರೆಸ್ ಆ ಕಾರ್ಯ ಮಾಡಿರಲಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಜಾಗ ಕೊಟ್ಟಿದ್ದರೆ ಅದು ಯಡಿಯೂರಪ್ಪನವರು. ನಮ್ಮ ಸರಕಾರವು ಅದ್ಭುತವಾಗಿ ಕೆಲಸ ಮಾಡುತ್ತಿದೆ. ಗೋಹತ್ಯೆ ನಿಷೇಧ- ಕೃಷಿ ಸಂಸ್ಕೃತಿ ಉಳಿಸುವ ಕಾರ್ಯವನ್ನು ನಮ್ಮ ಸರಕಾರ ಜಾರಿಗೊಳಿಸಿದೆ ಎಂದರು. ಪ್ರತಿಯೊಂದು ಜಿಲ್ಲೆಗೆ ಒಂದು ಗೋಶಾಲೆ ತೆರೆಯುವ ನಿರ್ಧಾರವನ್ನೂ ಯಡಿಯೂರಪ್ಪ ಅವರ ಸರಕಾರ ಮಾಡಿದ್ದು, ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕರುಗಳಾದ ತಿಪ್ಪಾರೆಡ್ಡಿ, ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಗೌಡ, ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ರಾಜ್ಯ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.







