ಬ್ಯಾರಿ ಜಾನಪದ ಕಲೆಗಳ ಕೋರ್ಸ್ ತರಬೇತಿಯ ಪ್ರಮಾಣ ಪತ್ರ ವಿತರಣೆ

ಮಂಗಳೂರು, ಜು.24: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ಸಂತ ಅಲೋಶಿಯಸ್ ಕಾಲೇಜಿನ (ಸ್ವಾಯತ್ತ) ಆಶ್ರಯದಲ್ಲಿ ಬ್ಯಾರಿ ದಫ್, ಕೋಲ್ಕಲಿ, ಒಪ್ಪನೆ ಪಾಟ್, ಕೈಕೊಟ್ಟ್ ಪಾಟ್ ಜಾನಪದ ಕಲೆಗಳ ಕೋರ್ಸ್ ತರಬೇತಿಯ ಪ್ರಮಾಣ ಪತ್ರ ಮತ್ತು ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಶನಿವಾರ ಕಾಲೇಜಿನ ಮಾಫೇಯಿ ಸೆಂಟರ್ (ಏರಿಕ್ ಮಥಾಯಸ್ ಸಭಾಂಗಣ)ನಲ್ಲಿ ನಡೆಯಿತು.
‘ದಫ್’ ತರಬೇತಿ ಪಡೆದ 14 ಮಂದಿ ಮತ್ತು ಕೋಲ್ಕಲಿ, ಒಪ್ಪನೆ ಪಾಟ್, ಕೈಕೊಟ್ಟ್ ಪಾಟ್ ತರಬೇತಿ ಪಡೆದ 20 ಮಂದಿಯ ಮೊದಲ ಬ್ಯಾಚ್‌ಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಬ್ಯಾರಿ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕೋರ್ಸ್ ಆರಂಭಿಸಲಾಗಿದೆ. ಮೊದಲ ಪ್ರಯತ್ನಕ್ಕೆ ಅಲೋಶಿಯಸ್ ಕಾಲೇಜು ಸಹಕಾರ ನೀಡಿದೆ. ವಿವಿಧ ಕಾಲೇಜುಗಳು ಆಸಕ್ತಿ ವಹಿಸಿದಲ್ಲಿ ಅಕಾಡಮಿಯು ಈ ಕೋರ್ಸ್ ತೆರೆಯಲು ಬದ್ಧವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಭಾಷೆಗೆ ಪ್ರಾಮುಖ್ಯತೆ ಕೊಟ್ಟಾಗ ಮಾತ್ರ ಸಂಸ್ಕೃತಿ ಬೆಳೆಯುತ್ತದೆ. ನಮ್ಮ ಸಂಸ್ಥೆಯು ಕನ್ನಡವಲ್ಲದೆ, ಪ್ರಾದೇಶಿಕ ಭಾಷೆಗಳಾದ ಕೊಂಕಣಿ, ತುಳು, ಬ್ಯಾರಿ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಮತ್ತು ಸಮಾನವಾಗಿ ಕಾಣುತ್ತದೆ ಎಂದರು.
ಪತ್ರಕರ್ತ ಹಂಝ ಮಲಾರ್ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ವೈದ್ಯರಾದ ಡಾ. ಸಿದ್ದೀಕ್ ವಗ್ಗ ಮತ್ತು ಕಲಾವಿದ ಹುಸೈನ್ ಕಾಟಿಪಳ್ಳ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಬ್ಯಾರಿ ಲಿಪಿಯನ್ನು ಗೂಗಲ್ ಹಾಗೂ ಎಲ್ಲಾ ಬ್ರೌಸರ್‌ಗಳ ಮೂಲಕ ಜಾಲತಾಣದಲ್ಲಿ ಇಂಗ್ಲಿಷ್ ಭಾಷೆಗೆ ಲಿಪ್ಯಂತರಣ ಮಾಡಿ ಸಾಧನೆಗೈದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಾದ ಯು.ಟಿ. ಮುಹಮ್ಮದ್ ಮಶ್ಫೂಕ್ ಹುಸೈನ್, ಕೆ.ಎ. ಇಸ್ಮಾಯಿಲ್ ಶಫೀಕ್, ಮೆರ್ಲಾಯ್ ಪಿಂಟೋ ಅವರನ್ನು ಸನ್ಮಾನಿಸಲಾಯಿತು.
ಸದಸ್ಯ ಸಂಚಾಲಕ ಕಮರುದ್ದೀನ್ ಸಾಲ್ಮರ, ಹಸನ್ ಮುಹಮ್ಮದ್, ನೂರ್ ಮುಹಮ್ಮದ್, ರಹೀಸ್ ಕಣ್ಣೂರು ಉಪಸ್ಥಿತರಿದ್ದರು.
ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮ ಸ್ವಾಗತಿಸಿದರು. ಕೋರ್ಸ್‌ನ ಸಂಯೋಜಕಿ ಫ್ಲೋರಾ ಕ್ಯಾಸ್ತಲಿನೊ ವಂದಿಸಿದರು. ಸದಸ್ಯ ಸಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.

















