ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ಆರೋಪದ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದೇನು?

ಬೆಂಗಳೂರು, ಜು.24: ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಖಾಸಗಿ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ದು, ವೈಯಕ್ತಿಕವಾಗಿ ನನ್ನ ತೇಜೊವಧೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಕಿಡಿಗಾರಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿ ಮಹಿಳೆಯರು, ಮಕ್ಕಳು, ವೃದ್ಧರು, ವಿಕಲಚೇತನರ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದ್ದೇನೆ. ಕೊರೋನ ಎರಡನೇ ಅಲೆಯ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಉಂಟಾದ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಇಲಾಖೆ ವತಿಯಿಂದ ಅಗತ್ಯ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಕೊರೋನ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್ ತೆರೆಯಲು ಕ್ರಮ ವಹಿಸಲಾಗಿದೆ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಜವಾಬ್ದಾರಿ ವಹಿಸಿಕೊಳ್ಳುವ ಸಂದರ್ಭದಲ್ಲಿ ಪೋಷಣ ಅಭಿಯಾನ ಯೋಜನೆ ಅಡಿಯಲ್ಲಿ ಪೋಷಣ ಮಾಸಾಚರಣೆಯಲ್ಲಿ ದೇಶದಲ್ಲಿ ನಮ್ಮ ರಾಜ್ಯವು 15ನೇ ಸ್ಥಾನದಲ್ಲಿತ್ತು. ಆದರೆ, ಕಳೆದ ಎರಡು ವರ್ಷದಲ್ಲಿ ನನ್ನ ನಿರಂತರ ಪರಿಶ್ರಮ ಹಾಗೂ ಅಧಿಕಾರಿಗಳ ಸಹಕಾರದೊದಿಗೆ 2ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಅಡಿಯಲ್ಲಿ ದೇಶದಲ್ಲಿ ರಾಜ್ಯವು 26ನೆ ಸ್ಥಾನದಲ್ಲಿತ್ತು. ಈಗ ಐದನೇ ಸ್ಥಾನಕ್ಕೆ ತರಲಾಗಿದೆ. ರಾಜ್ಯದಲ್ಲಿ ಅಪೌಷ್ಟಿಕತೆ ಪ್ರಮಾಣವು ಶೇ.0.3ರಷ್ಟಿತ್ತು. ನಾನು ಅಧಿಕಾರ ಸ್ವೀಕರಿಸಿದ ಮೇಲೆ ಎರಡು ವರ್ಷಗಳಲ್ಲಿ ಶೇ.0.1ಕ್ಕೆ ಇಳಿಸಲಾಗಿದೆ. ಒಬ್ಬ ಮಹಿಳೆಯಾಗಿ ನನಗೆ ಪಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿರುವ ಅವಕಾಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಏಳಿಗೆಗಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಮೂಲಕ ರಹಸ್ಯ ಕಾರ್ಯಾಚರಣೆ ನಡೆಸಿ ನನ್ನನ್ನು ಆರೋಪಿತಳನ್ನಾಗಿ ಮಾಡುವ ಪ್ರಯತ್ನ ನಡೆಸುತ್ತಿರುವುದು ದುರದೃಷ್ಟಕರ. ಖಾಸಗಿ ವಾಹಿನಿಯಲ್ಲಿ ಹೇಳುತ್ತಿರುವ ಹಾಗೆ ಮೊಟ್ಟೆ ಖರೀದಿಗೆ ಇದುವರೆಗೂ ಯಾವುದೇ ಟೆಂಡರ್ ಕರೆದಿಲ್ಲ. ಅಲ್ಲದೇ ಟೆಂಡರ್ ನೀಡಲು ನಾನು ವೈಯಕ್ತಿಕವಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಮ್ಮ ಪಕ್ಷದ ಶಾಸಕ ಪರಣ್ಣ ಮುನವಳ್ಳಿಯವರು ತಮ್ಮ ಸಂಬಂಧಿಕರು ಎಂದು ಕರೆದುಕೊಂಡು ಬಂದಾಗ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಹಣಕಾಸಿನ ವ್ಯವಹಾರದ ಕುರಿತು ನಾನು ಮಾತನಾಡಿಲ್ಲ. ಆದರೆ, ಒಬ್ಬ ಮಹಿಳೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ರಾಜಕೀಯದಲ್ಲಿ ನನ್ನದೇ ಆದ ತತ್ವ ಸಿದ್ಧಾಂತ ನಂಬಿಕೊಂಡು ಕೆಲಸ ಮಾಡುತ್ತಿರುವ ನನ್ನ ಏಳಿಗೆಯನ್ನು ಸಹಿಸದವರು, ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವ ಅನುಮಾನ ಮೂಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಾಹಿತಿ ಪ್ರಕಾರ 2021ರ ಫೆಬ್ರವರಿ ತಿಂಗಳಲ್ಲಿಯೇ ರಹಸ್ಯ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳುತ್ತಿದ್ದು, ಆದರೆ, ರಹಸ್ಯ ಕಾರ್ಯಾಚರಣೆ ಮಾಡಿದವರು ಆರು ತಿಂಗಳಿನಿಂದ ಮಾಧ್ಯಮದವರ ಮುಂದೆ ಬಿಡುಗಡೆ ಮಾಡದೇ ಇಟ್ಟುಕೊಂಡಿರುವ ಉದ್ದೇಶದ ಬಗ್ಗೆ ಅನುಮಾನ ಮೂಡಿಸುತ್ತದೆ. ಇದರ ಹಿಂದೆ ವ್ಯವಸ್ಥಿತ ರಾಜಕೀಯ ಪಿತೂರಿ ಇರುವುದು ಎದ್ದು ಕಾಣಿಸುತ್ತದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಕಾನೂನು ಹೋರಾಟಕ್ಕೆ ಚಿಂತನೆ
ನಾನು ಈ ರೀತಿಯ ಷಡ್ಯಂತ್ರಕ್ಕೆ ಬಲಿಯಾಗದೆ, ಪಕ್ಷ ಹಾಗೂ ಪಕ್ಷದ ನಾಯಕರು ನನ್ನ ಮೇಲೆ ಇಟ್ಟಿರುವ ಭರವಸೆ, ನಂಬಿಕೆಯನ್ನು ಉಳಿಸಿಕೊಂಡು ಪ್ರಾಮಾಣಿಕವಾಗಿ ರಾಜ್ಯದ ಜನರ ಸೇವೆ ಮಾಡುತ್ತೇನೆ. ಅಲ್ಲದೇ ನನ್ನ ವಿರುದ್ಧ ಆಧಾರರಹಿತವಾಗಿ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಕಾನೂನು ಹೋರಾಟವನ್ನೂ ಮಾಡಲು ಚಿಂತನೆ ನಡೆಸುತ್ತಿದ್ದೇನೆ.
-ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ







