ಕೃಷ್ಣಾ ನದಿಗೆ 2.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಮುಳುಗಿದ ಶೀಲಹಳ್ಳಿ ಸೇತುವೆ

ಲಿಂಗಸುಗೂರು, ಜು.24: ತಾಲೂಕಿನ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಿನ್ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯಿಂದ ಕೃಷ್ಣಾ ನದಿಗೆ 2.50 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಪರಿಣಾಮ ಶೀಲಹಳ್ಳಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಬಸವಸಾಗರ ಜಲಾಶಯದ ರಿಸರ್‍ವಯರ್ ಆಗಿರುವ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಆಲಮಟ್ಟಿಯಿಂದ ಬಸವಸಾಗರ ಜಲಾಶಯಕ್ಕೂ ಅಪಾರ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.
ಬಸವಸಾಗರ ಅಣೆಕಟ್ಟಿನ ಭದ್ರತೆಯ ದೃಷ್ಟಿಯಿಂದ 29 ಕ್ರಷ್ಟ್ ಗೇಟುಗಳ ಮೂಲಕ ಎರಡು ಲಕ್ಷ ಐವತ್ತು ಸಾವಿರ ಕ್ಯುಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಹರಿಬಿಟ್ಟಿದ್ದರಿಂದ ಶೀಲಹಳ್ಳಿ ಸೇತುವೆ ಜಲಾವೃತವಾಗಿ ಜನ, ವಾಹನಗಳ ಓಡಾಟ ಸ್ಥಗಿತಗೊಂಡಿದೆ.
ಸೇತುವೆ ಮುಳುಗಡೆಯಾದ ಪರಿಣಾಮ ಹಂಚಿನಾಳ, ಯರಗೊಡಿ, ಕಡದರಗಡ್ಡಿ ಗ್ರಾಮಗಳು ರಸ್ತೆ ಸಂಪರ್ಕವನ್ನು ಕಳೆದುಕೊಂಡಿವೆ. ಜಲದುರ್ಗ ಮಾರ್ಗವಾಗಿ ಸುತ್ತುವರೆದು ಈ ಗ್ರಾಮಸ್ಥರು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವ ಸಾಧ್ಯತೆ ಇರುವುದರಿಂದ ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.







