'ನಾಯಕತ್ವ ಬದಲಾವಣೆ' ಕುತೂಹಲಕ್ಕೆ ಜು.26 ರಂದು ತೆರೆ ಬೀಳುವುದೇ?

ಬೆಂಗಳೂರು, ಜು. 24: 'ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ' ಎಂದು ಪ್ರಕಟಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, `ನನಗೆ ರಾಜಕೀಯ ಜನ್ಮ ನೀಡಿದ ಶಿವಮೊಗ್ಗ ಜಿಲ್ಲೆಯ ಅದರಲ್ಲೂ ಶಿಕಾರಿಪುರ ತಾಲೂಕಿನ ಜನತೆಯ ಋಣವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ' ಎಂದು ಹೇಳಿರುವುದನ್ನು ಗಮನಿಸಿದರೆ ವರಿಷ್ಟರು ನಾಯಕತ್ವ ಬದಲಾವಣೆಗೆ ಮುಂದಾಗಿರುವುದು ಬಹುತೇಕ ನಿಶ್ಚಿತವಾದಂತಾಗಿದೆ.
ಜು.26 ರಂದು ಬೆಳಗ್ಗೆ ಅಥವಾ ಮಧ್ಯಾಹ್ನದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಆದರೆ, ಕೊನೆಯ ಕ್ಷಣದ ವರೆಗೆ ಯಡಿಯೂರಪ್ಪನವರ ನಡೆ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈಗಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ದಿಲ್ಲಿ ವರಿಷ್ಟರು ಒಂದಿಷ್ಟು ದಿನಗಳ ಕಾಲ ಕಾದುನೋಡುವ ತಂತ್ರ ಅನುಸರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಅಂದರೆ ಸೋಮವಾರ ಮುಖ್ಯಮಂತ್ರಿಗೆ ರಾಜೀನಾಮೆ ನೀಡುವಂತೆ ಬಿಜೆಪಿ ವರಿಷ್ಟರು ಸೂಚಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಹಾಗೂ ಉತ್ತರ ಕರ್ನಾಟಕ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಲ್ಲಿ ದುಸ್ಸಾಹಸಕ್ಕೆ ಕೈ ಹಾಕಲಾರರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಆದರೆ, ಇದೇ ವೇಳೆ ಮತ್ತೊಂದು ಮೂಲದ ಪ್ರಕಾರ ಮುಖ್ಯಮಂತ್ರಿಗೆ ಬಿಜೆಪಿ ವರಿಷ್ಟರು ಸೋಮವಾರ ರಾಜೀನಾಮೆ ನೀಡುವಂತೆ ಸೂಚಿಸುವ ಸಾಧ್ಯತೆಯಿದ್ದು, ಸೋಮವಾರ(ಜು.26) ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆಂದು ಎನ್ನಲಾಗಿದೆ. ರಾಜೀನಾಮೆ ನೀಡಲು ಕ್ಷಣಗಣನೆ ಆರಂಭವಾಗಿದ್ದರೂ ಒಂದಿಷ್ಟು ವಿಚಲಿತರಾಗದ ಯಡಿಯೂರಪ್ಪನವರು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ನಾಳೆ (ಜು.25) ಬೆಳಗ್ಗೆ 9ಗಂಟೆಗೆ ಬೆಂಗಳೂರಿನಿಂದ ಬೆಳಗಾವಿಗೆ ತೆರಳಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಆ ಬಳಿಕ ಪ್ರವಾಹ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಪ್ರವಾಹ ಬಂದಿರುವ ಕಾರಣ ಸೋಮವಾರವೇ ಸಿಎಂಗೆ ರಾಜೀನಾಮೆ ನೀಡಿ ಎಂಬ ಸಂದೇಶ ರವಾನಿಸುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಸಂಪುಟ ಸಹೋದ್ಯೋಗಿಗಳ ನಡೆ ನಿಗೂಢವಾಗಿದೆ. ಈ ನಡುವೆ ಬಿಜೆಪಿ ವರಿಷ್ಟರೂ ಯಾವುದೇ ಸ್ಪಷ್ಟ ತೀರ್ಮಾನ ಪ್ರಕಟಿಸದ ಹಿನ್ನೆಲೆಯಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಯೋ ಅಥವಾ ಹೊಸ ನಾಯಕನಿಗೆ ಸಿಎಂ ಪಟ್ಟ ಕಟ್ಟುವರೋ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿಸಿದೆ.
'ರಾಜ್ಯ ರಾಜಕಾರಣದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಿಎಂ ಬಿಎಸ್‍ವೈ ಈಗಾಗಲೇ ತಮ್ಮ ಹೇಳಿಕೆ ನೀಡಿದ್ದು, ಯಡಿಯೂರಪ್ಪ ಹಾಗೂ ಕೇಂದ್ರದ ವರಿಷ್ಟರೊಂದಿಗೆ ಏನು ಮಾತುಕತೆ ನಡೆದಿದೆ ನನಗೆ ಗೊತ್ತಿಲ್ಲ. ಏನೇ ಮಾತುಕತೆ ನಡೆದಿದ್ದರೂ ಅದು ಯಡಿಯೂರಪ್ಪ ಹಾಗೂ ಕೇಂದ್ರದ ನಾಯಕರಿಗೆ ಗೊತ್ತು. ನನ್ನನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂಬ ಬಗ್ಗೆ ನನ್ನ ಜೊತೆ ಯಾರೂ ಚರ್ಚಿಸಿಲ್ಲ. ಏನೇ ನಿರ್ಣಯವಿದ್ದರೂ ಪಕ್ಷದ ರಾಷ್ಟ್ರೀಯಾಧ್ಯಕ್ಷರು ಹಾಗೂ ಪ್ರಧಾನಿ ಮೋದಿಯವರು ಇದ್ದಾರೆ. ಈ ಕುರಿತು ಅವರುಗಳೇ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ'
-ಪ್ರಹ್ಲಾದ್ ಜೋಶಿ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರ ಸಚಿವ







