ಇದು ದಿಲ್ಲಿ ಜನತೆಗೆ ಮಾಡಿದ ಅವಮಾನ: ಲೆ.ಗವರ್ನರ್ ನಡೆಗೆ ಕೇಜ್ರಿವಾಲ್ ಆಕ್ರೋಶ

ಹೊಸದಿಲ್ಲಿ: ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ವಿರುದ್ಧದ ಪ್ರಕರಣಗಳಿಗಾಗಿ ದಿಲ್ಲಿ ಸರಕಾರವು ಆಯ್ಕೆ ಮಾಡಿದ ವಕೀಲರ ಸಮಿತಿಯನ್ನು ತಿರಸ್ಕರಿಸಿದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿರ್ಧಾರ "ದಿಲ್ಲಿ ಜನರಿಗೆ ಮಾಡಿದ ಅವಮಾನ" ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. .
"ಸಂಪುಟ ತೆಗೆದುಕೊಳ್ಳುವ ನಿರ್ಧಾರಗಳನ್ನುತಿರಸ್ಕರಿಸಿದ್ದು ದಿಲ್ಲಿ ಜನರಿಗೆ ಮಾಡಿದ ಅವಮಾನ. ದಿಲ್ಲಿಯ ಜನರು ಐತಿಹಾಸಿಕ ಬಹುಮತದೊಂದಿಗೆ ಎಎಪಿ ಸರಕಾರವನ್ನು ಆಯ್ಕೆ ಮಾಡಿ ಬಿಜೆಪಿಯನ್ನು ಸೋಲಿಸಿದ್ದರು. ದೈನಂದಿನ ಕೆಲಸಗಳಲ್ಲಿ ಇಂತಹ ಹಸ್ತಕ್ಷೇಪ ದಿಲ್ಲಿ ಜನರಿಗೆ ಮಾಡುವ ಅವಮಾನ. ಬಿಜೆಪಿ ಪ್ರಜಾಪ್ರಭುತ್ವವನ್ನು ಗೌರವಿಸಬೇಕು "ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರಕಾರವು ಆಯ್ಕೆ ಮಾಡಿದ ವಕೀಲರ ಪಟ್ಟಿಯನ್ನು ತಿರಸ್ಕರಿಸಿದ ಬೈಜಾಲ್, ದಿಲ್ಲಿ ಪೊಲೀಸರು ಆಯ್ಕೆ ಮಾಡಿದ ತಂಡವನ್ನು ಅನುಮೋದಿಸಿದ್ದಾರೆ, ಇದು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸಕಾರಕ್ಕೆ ವರದಿ ಮಾಡುತ್ತದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಜನವರಿ 26 ರ ಹಿಂಸಾಚಾರ ಹಾಗೂ ವಿಧ್ವಂಸಕ ಕೃತ್ಯಗಳ ಬಗ್ಗೆ ರೈತರ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ದಿಲ್ಲಿ ಸರಕಾರದಿಂದ ಆಯ್ಕೆಯಾದ ವಕೀಲರು ದಿಲ್ಲಿ ಪೊಲೀಸರ ಸಾರ್ವಜನಿಕ ಅಭಿಯೋಜಕರಾಗುತ್ತಾರೆ ಎಂದು ಸೋಮವಾರ ಕೇಜ್ರಿವಾಲ್ ಅವರ ಕ್ಯಾಬಿನೆಟ್ ನಿರ್ಧರಿಸಿತ್ತು.







