ಹಿರಿಯ ಪತ್ರಕರ್ತ ಎನ್.ಗುರುರಾಜ್ ಗೆ ಪತ್ರಿಕಾ ದಿನದ ಗೌರವ ಪ್ರದಾನ

ಉಡುಪಿ, ಜು. 24: ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎನ್.ಗುರುರಾಜ್ ಅವರಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುವ 2021ನೆ ಸಾಲಿನ ಪತ್ರಿಕಾ ದಿನದ ಗೌರವವನ್ನು ಅವರ ಪರ್ಕಳದ ಸ್ವಗೃಹದಲ್ಲಿ ಶುಕ್ರವಾರ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಮುದ್ರಣ ಮಾಧ್ಯಮ ಇಂದಿಗೂ ವಿಶ್ವಾಸಾ ರ್ಹತೆಯನ್ನು ಉಳಿಸಿಕೊಳ್ಳಲು ಗುರುರಾಜ್ ಅವರಂತಹ ಅನೇಕ ಹಿರಿಯ ಪತ್ರಕರ್ತರು ಮಾಡಿದ ನಿಸ್ವಾರ್ಥ ಸೇವೆ ಕಾರಣವಾಗಿದೆ ಎಂದು ತಿಳಿಸಿದರು.
ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಪತ್ರಕರ್ತರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ಮಾತನಾಡಿದರು. ನಿರ್ಮಲಾ ಗುರುರಾಜ್, ಕಲಾವಿದ ಪಿ.ಎನ್.ಆಚಾರ್ಯ, ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ನರಸಿಂಹ ಬೊಮ್ಮರಬೆಟ್ಟು, ವಸಂತರಾಜ್, ಪತ್ರಕರ್ತ ದೇವರಾಯ ಪ್ರಭು, ಛಾಯಾಗ್ರಾಹಕ ಸಂತೋಷ ಜೈನ್ ಈದು ಅತಿಥಿಗಳಾಗಿದ್ದರು.
ಹಿರಿಯ ಪತ್ರಕರ್ತ ಪದ್ಮಾಕರ ಭಟ್ ಈದು ಪ್ರಸ್ತಾವಿಕ ಮಾತುಗಳನ್ನಾಡಿದರು, ಯುವ ಸಂಘಟಕ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನರಸಿಂಹಮೂರ್ತಿ ರಾವ್ ವಂದಿಸಿದರು.







