ರೈತರ ಬಗ್ಗೆ ಸರಕಾರ ತಲೆಕೆಡಿಸಿಕೊಂಡಿಲ್ಲ, ಹೀಗಾಗಿ ಅದರ ಬಳಿ ಅವರ ಸಾವುಗಳ ಅಂಕಿಅಂಶಗಳಿಲ್ಲ: ರೈತ ನಾಯಕರು

Photo: PTI
ಜಲಂಧರ, ಜು.24: ಪ್ರತಿಭಟನೆಗಳ ಸಂದರ್ಭ ರೈತರ ಸಾವುಗಳ ಬಗ್ಗೆ ತನ್ನ ಬಳಿ ಅಂಕಿಅಂಶಗಳಿಲ್ಲ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ಹೇಳಿಕೊಂಡಿರಬಹುದು,ಆದರೆ ಸಂಸತ್ ಭವನದಿಂದ ಕೇವಲ 150 ಮೀ.ದೂರದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಇದನ್ನು ಒಪ್ಪಲು ಸಿದ್ಧರಿಲ್ಲ. ಪ್ರತಿಭಟನೆ ಸಂದರ್ಭದಲ್ಲಿ ತೀವ್ರ ಚಳಿ,ಬಿಸಿಲು,ಮಳೆ ಮತ್ತು ಅಪಘಾತಗಳಿಂದಾಗಿ ತಮ್ಮ ಒಡನಾಡಿಗಳು ಸತ್ತಿದ್ದರೂ ಸರಕಾರವು ತನ್ನ ಬಳಿ ಮಾಹಿತಿ ಇಲ್ಲವೆಂದು ಹೇಳುತ್ತಿದೆ,‘ಕಿಸಾನ್ ಸಂಸದ್ ’ಈ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ರೈತರು ಹೇಳಿದ್ದಾರೆ. ಕಳೆದ ಎಂಟು ತಿಂಗಳುಗಳಿಂದಲೂ ನಡೆಯುತ್ತಿರುವ ರೈತರ ಪ್ರತಿಭಟನೆ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಸಮಾನಾಂತರ ‘ಕಿಸಾನ್ ಸಂಸದ್ ’ಗಾಗಿ ಗುರುವಾರ ಜಂತರ್ ಮಂತರ್ ತಲುಪಿದೆ.
ಕಳೆದ ಕೆಲವು ದಿನಗಳಲ್ಲಿ ಎರಡು ಮಹತ್ವದ ಬೆಳವಣಿಗೆಗಳು ನಡೆದಿವೆ. ಮೊದಲನೆಯದು ಕಿಸಾನ್ ಸಂಸದ್ ನ ಪ್ರಕಟಣೆ. ಎರಡನೆಯದು ಮೂರು ಕೃಷಿ ಕಾಯ್ದೆಗಳ ರದ್ದತಿ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕುರಿತು ಕಾನೂನಾತ್ಮಕ ಖಾತರಿಗಾಗಿ ಒತ್ತಾಯಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಎಲ್ಲ ಪಕ್ಷಗಳ ಸಂಸದರಿಗೆ ‘ಜನತಾ ಸಚೇತಕಾಜ್ಞೆ’ಯನ್ನು ಹೊರಡಿಸಿರುವುದು.
ಈ ಜನತಾ ಸಚೇತಕಾಜ್ಞೆಯಿಂದಾಗಿಯೇ ಸಂಸದರು ಜು.20ರಂದು ಪ್ರತಿಭಟನೆಗಳ ಸಂದರ್ಭ ರೈತರ ಸಾವುಗಳ ಕುರಿತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಂದ ಉತ್ತರವನ್ನು ಕೇಳಿದ್ದರು. ಈ ಬಗ್ಗೆ ಕೇಂದ್ರದ ಬಳಿ ಯಾವುದೇ ದಾಖಲೆಯಿಲ್ಲ ಮತ್ತು ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ಒದಗಿಸುವ ಯಾವುದೇ ಪ್ರಸ್ತಾವನೆ ಕೇಂದ್ರದ ಮುಂದಿಲ್ಲ ಎಂದು ತೋಮರ್ ತಿಳಿಸಿದ್ದರು.
ಆದರೆ ಪಂಜಾಬಿನಲ್ಲಿಯ ರೈತರು ಮತ್ತು ಅವರ ಕುಟುಂಬಗಳಿಗೆ ಈವರೆಗೆ ಎಷ್ಟು ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವುದು ಚೆನ್ನಾಗಿ ತಿಳಿದಿದೆ. ಎಸ್ಕೆಎಂ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಂತೆ ಪ್ರತಿಭಟನೆಯಲ್ಲಿ ಈವರೆಗೆ 537 ರೈತರು ಪ್ರಾಣ ಕಳೆದುಕೊಂಡಿದ್ದಾರೆ.
ಸರಕಾರದ ಹೇಳಿಕೆಯ ಪೊಳ್ಳುತನವನ್ನು ಬಯಲಿಗೆಳೆಯಲು ಎಸ್ಕೆಎಂ 2020,ನ.24ರಿಂದ ಪ್ರತಿಭಟನೆ ನಡೆಸುತ್ತಿರುವಾಗಲೇ ಮೃತಪಟ್ಟಿರುವ ಎಲ್ಲ ರೈತರ ಪಟ್ಟಿಯನ್ನೊಳಗೊಂಡಿರುವ ಬ್ಲಾಗೊಂದರ ವಿವರಗಳನ್ನು ಹಂಚಿಕೊಂಡಿದೆ. ಈ ಬ್ಲಾಗ್ನ್ನು ಪ್ರತಿ ಎರಡು ವಾರಗಳಿಗೆ ಪರಿಷ್ಕರಿಸಲಾಗುತ್ತದೆ.
ಬ್ಲಾಗ್ನಲ್ಲಿಯ ವಿವರಗಳಂತೆ 2020 ಅಕ್ಟೋಬರ್ ವೇಳೆಗಾಗಲೇ 12 ರೈತರು ಮೃತಪಟ್ಟಿದ್ದರು. ದಿಲ್ಲಿಯ ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಸಾವನ್ನಪ್ಪಿರುವ ರೈತರ ಭಾವಚಿತ್ರಗಳು ಮತ್ತು ವಿವರಗಳು ಬ್ಲಾಗ್ನಲ್ಲಿವೆ. ರೈತರ ಸಾವುಗಳ ಕುರಿತು ಇಂತಹುದೇ ಸ್ಮರಣ ಪುಟ (Trolley Times) ವೆಬ್ಸೈಟ್ನಲ್ಲಿ ಲಭ್ಯವಿದೆ.
ಕೇಂದ್ರ ಸರಕಾರದ ಉತ್ತರದಿಂದ ರೈತರ ಕುಟುಂಬಗಳು ತೀವ್ರವಾಗಿ ನೊಂದುಕೊಂಡಿವೆ. ‘ಸರಕಾರಕ್ಕೆ ಪ್ರತಿಯೊಂದೂ ಗೊತ್ತಿದೆ. ಅವರ ಬಳಿ ಎಲ್ಲ ದಾಖಲೆಗಳಿವೆ,ಆದರೆ ರೈತರ ತ್ಯಾಗಗಳನ್ನು ಮತ್ತು ಅವರ ಕಾನೂನುಬದ್ಧ ಪ್ರತಿಭಟನೆಯನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಯಾರಾದರೂ ಸೆಲೆಬ್ರಿಟಿ ನಿಧನರಾದರೆ ಅಥವಾ ಶ್ರೀಮಂತರ ಮನೆಯಲ್ಲಿ ಮಗು ಜನನವಾದರೆ ಈ ನಾಯಕರು ಮೊದಲು ಅಲ್ಲಿ ಹಾಜರಾಗುತ್ತಾರೆ. ಆದರೆ ರೈತರ ವಿಷಯ ಬಂದಾಗ ಅವರು ನಮ್ಮನ್ನು ಕಡೆಗಣಿಸುತ್ತಾರೆ .ಇಂತಹ ಹೃದಯಹೀನ ಸರಕಾರದ ಬಗ್ಗೆ ನಮಗೆ ಯಾವುದೇ ಭರವಸೆ ಉಳಿದಿಲ್ಲ’ ಎಂದು ಈ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ.
ಪ್ರತಿಭಟನೆಯಲ್ಲಿ ಎಷ್ಟು ರೈತರು ಮೃತಪಟ್ಟಿದ್ದಾರೆ ಎನ್ನುವುದು ಮೋದಿ ಸರಕಾರಕ್ಕೆ ಗೊತ್ತಿಲ್ಲವಾದರೆ ಅದು ಎಸ್ಕೆಎಮ್ನಿಂದ ತಿಳಿದುಕೊಳ್ಳಬಹುದು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಡಾ.ದರ್ಶನ ಪಾಲ್ ಹೇಳಿದರು. ರೈತರ ಸಾವುಗಳ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸಲು ಅದು ಯಾವುದಾದರೂ ಏಜೆನ್ಸಿಯನ್ನು ನೇಮಿಸಬಹುದಿತ್ತು,ಆದರೆ ಅದು ಜನರನ್ನು ಹಾದಿತಪ್ಪಿಸಲು ಮಾತ್ರ ಬಯಸುತ್ತಿದೆ. ಕೋವಿಡ್ ಎರಡನೇ ಅಲೆ ಸಂದರ್ಭ ಜನರು ಉಸಿರಿಗಾಗಿ ಒದ್ದಾಡುತ್ತ ಸಾವನ್ನಪ್ಪಿದ್ದರೆ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂಂದು ಸಂಸತ್ತಿನಲ್ಲಿ ರಾಜಾರೋಷವಾಗಿ ಹೇಳಿರುವ ಈ ಸರಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಕಿಸಾನ್ ಸಂಸದ್ ಮುಖ್ಯವಾಗಿ ಕೃಷಿ ಕಾಯ್ದೆಗಳು,ಎಂಎಸ್ಪಿ,ರೈತರ ಆತ್ಮಹತ್ಯೆಗಳು ಮತ್ತು ದೇಶದಲ್ಲಿ ಕೃಷಿಯನ್ನು ಬಾಧಿಸುತ್ತಿರುವ ಇತರ ಪ್ರಮುಖ ವಿಷಯಗಳಿಗೆ ಸೀಮಿತವಾಗಿರುತ್ತದೆ ಎಂದ ಪಾಲ್,‘ಆದರೆ ಪೆಗಾಸಸ್ ಸ್ಪೈವೇರ್ನಲ್ಲಿ ಭಾರತ ಸರಕಾರದ ಪಾತ್ರ,ಸಾಮಾಜಿಕ ಹೋರಾಟಗಾರರ ಬಂಧನಗಳು,ಕೋವಿಡ್ ಸಾವುಗಳು,ಇಂಧನ ಮತ್ತು ಅಗತ್ಯ ಸಾಮಗ್ರಿಗಳ ಬೆಲೆಏರಿಕೆ ಕುರಿತೂ ನಾವು ಮಾತನಾಡಲಿದ್ದೇವೆ. ನಾವು ಪ್ರತಿದಿನ ನಿರ್ಣಯಗಳನ್ನು ಅಂಗೀಕರಿಸುತ್ತೇವೆ ’ಎಂದರು.
ಪ್ರತಿಭಟನೆಯಲ್ಲಿ ಎಷ್ಟು ರೈತರು ಮೃತಪಟ್ಟಿದ್ದಾರೆ ಎನ್ನುವುದೂ ಗೊತ್ತಿಲ್ಲದಿದ್ದರೆ ಇದೆಂತಹ ಸರಕಾರ ಎಂದು ಇನ್ನೋರ್ವ ಎಸ್ಕೆಎಂ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಪ್ರಶ್ನಿಸಿದರು.
ಮೋದಿ ಸರಕಾರದ ಉದ್ದೇಶಗಳು ಮೊದಲ ದಿನದಿಂದಲೇ ಕೆಟ್ಟದ್ದಾಗಿವೆ. ಸಂಸತ್ತಿನಲ್ಲಿ ಇಂತಹ ಹೇಳಿಕೆಯನ್ನು ನೀಡುವ ಮೂಲಕ ತೋಮರ್ ರೈತರ ಬಗ್ಗೆ ತನ್ನ ಸರಕಾರದ ಅಸಡ್ಡೆಯ ನಿಲುವನ್ನು ಸಾಬೀತುಗೊಳಿಸಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ಮಂಜಿತ್ ಸಿಂಗ್ ರಾಯ್ ಹೇಳಿದರು.
ಕೃಪೆ: thewire.in







