ಉಡುಪಿ: 3ಕ್ಕಿಳಿದ ಕೋವಿಡ್ ಪಾಸಿಟಿವ್ ಸಂಖ್ಯೆ

ಉಡುಪಿ, ಜು.24: ಜಿಲ್ಲೆಯಲ್ಲಿ ಶನಿವಾರ ಒಮ್ಮೆಗೆ ಕೋವಿಡ್‌ಗೆ ಪಾಸಿಟಿವ್ ಬಂದವರ ಸಂಖ್ಯೆ ಮೂರಕ್ಕಿಳಿದಿದೆ. ಶುಕ್ರವಾರ ಜಿಲ್ಲೆಯಲ್ಲಿ 3760 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಇವರಲ್ಲಿ 131 ಮಂದಿ ಪಾಸಿಟಿವ್ ಬಂದಿದ್ದರು. ಆದರೆ ಇಂದು 3393 ಮಂದಿಯ ಪರೀಕ್ಷೆ ನಡೆಸಿದಾಗ ಕೇವಲ ಮೂವರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಕೋವಿಡ್ ಬುಲೆಟಿನ್ ತಿಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಫೆಬ್ರವರಿ 3ರಂದು ಕೇವಲ ಮೂವರಲ್ಲಿ ಪಾಸಿಟಿವ್ ಕಂಡುಬಂದ ನಂತರ ಕಂಡುಬಂದಿರುವ ಅತಿ ಕನಿಷ್ಠ ಪಾಸಿಟಿವ್ ಸಂಖ್ಯೆ ಇದಾಗಿದೆ. ಆದರೆ ಒಂದು ವಾರದ ಸರಾಸರಿಯನ್ನು ಪರಿಗಣಿಸಿದ ಬಳಿಕವಷ್ಟೇ ಈ ಬಗ್ಗೆ ಖಚಿತವಾಗಿ ಹೇಳಬಹುದಾಗಿದೆ ಎಂದು ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಶನಿವಾರ ಜಿಲ್ಲೆಯಲ್ಲಿ ಕೋವಿಡ್‌ಗೆ ಯಾರೂ ಬಲಿಯಾಗಿಲ್ಲ. ಕೋವಿಡ್ ನಿಂದ ಜಿಲ್ಲೆಯಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 409 ಆಗಿದೆ. ದಿನದಲ್ಲಿ 101 ಮಂದಿ ಗುಣಮುಖರಾಗಿದ್ದು, 749 ಮಂದಿ ಇ ನ್ನೂ ಸೋಂಕಿಗೆ ಸಕ್ರಿಯ ರಾಗಿದ್ದಾರೆ.
ದಿನದಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟ ಮೂವರು ಸಹ ಪುರುಷ ರಾಗಿದ್ದು, ಮೂವರು ಸಹ ಉಡುಪಿ ತಾಲೂಕಿನವರೇ. ಇವರಲ್ಲಿ ಒಬ್ಬರನ್ನು ಕೋವಿಡ್ ಆಸ್ಪತ್ರೆ ಹಾಗೂ ಉಳಿದಿಬ್ಬರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಶುಕ್ರವಾರ 101 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 67,619ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3393 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲೆ ಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 68,777ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,58,706 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
8 ಮಂದಿ ಚಿಕಿತ್ಸೆಯಲ್ಲಿ: ಜಿಲ್ಲೆಯಲ್ಲೀಗ ಎಂಟು ಮಂದಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ. ಇವರಲ್ಲಿ ಒಬ್ಬ ಮಹಿಳೆ ಮಾತ್ರ ಜಿಲ್ಲೆಯವ ರಾಗಿದ್ದು ಉಳಿದವರೆಲ್ಲರೂ ಹೊರಜಿಲ್ಲೆಯವರು. ಇವರಲ್ಲಿ ಆರು ಮಂದಿ ಕೆಎಂಸಿ ಮಣಿಪಾಲದಲ್ಲಿ ಹಾಗೂ ಇಬ್ಬರು ನಗರದ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
1,547 ಮಂದಿಗೆ ಕೋವಿಡ್ ಲಸಿಕೆ
ಉಡುಪಿ ಜಿಲ್ಲೆಯಲ್ಲಿ ಇಂದು 1,547 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಇವರಲ್ಲಿ 1,069 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿ ದರೆ, 478 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು 18ರಿಂದ 44 ವರ್ಷದೊಳಗಿನ 900 ಮಂದಿ ಮೊದಲ ಡೋಸ್ ಹಾಗೂ 12 ಮಂದಿ ಎರಡನೇ ಡೋಸನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 168 ಮಂದಿ ಮೊದಲ ಡೋಸ್ ಹಾಗೂ 464 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಇಬ್ಬರು ಆರೋಗ್ಯ ಕಾರ್ಯಕರ್ತರು ಹಾಗೂ ಒಬ್ಬ ಮುಂಚೂಣಿ ಕಾರ್ಯಕರ್ತನಿಗೂ ಇಂದು ಲಸಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ 4,92,094 ಮಂದಿ ಲಸಿಕೆಯ ಮೊದಲ ಡೋಸ್ ಪಡೆದರೆ, 1,69,821 ಮಂದಿ ಎರಡನೇ ಡೋಸ್‌ನ್ನು ಪಡೆದು ಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.







