ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲುಗಳ ಓಡಾಟ ಪುನರಾರಂಭ

ಸಾಂದರ್ಭಿಕ ಚಿತ್ರ
ಉಡುಪಿ, ಜು.24: ಮಹಾರಾಷ್ಟ್ರದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದ ಸ್ಥಗಿತಗೊಂಡಿದ್ದ ಕೊಂಕಣ ರೈಲು ಮಾರ್ಗದ ರೈಲುಗಳ ಸಂಚಾರ ಇಂದಿನಿಂದ ಪುನರಾರಂಭಗೊಂಡಿದೆ.
ರತ್ನಗಿರಿ ಜಿಲ್ಲೆಯ ಚಿಪ್ಳುಣ್ ಹಾಗೂ ಕಮತೆ ನಿಲ್ದಾಣಗಳ ನಡುವೆ ಹರಿಯುವ ವಶಿಷ್ಠಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದುದರಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ ನದಿ ಹರಿವು ಸಾಮಾನ್ಯ ಸ್ಥಿತಿಗೆ ಬಂದಿದ್ದು ಇಂದು ಮುಂಜಾನೆ 3:45ಕ್ಕೆ ಮಾರ್ಗ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ತಾಂತ್ರಿಕ ಸಮಿತಿ ವರದಿ ನೀಡಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರ ಪುನರಾರಂಭಗೊಂಡಿದೆ ಎಂದು ಕೊಂಕಣ ರೈಲ್ವೆ ಇಂದು ಬೆಳಗ್ಗೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶೇಷ ರೈಲು: ಮಡಗಾಂವ್ನಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕರನ್ನು ಕಳುಹಿಸಿಕೊಡಲು ನಿನ್ನೆ ಸಂಜೆ ಮಡಗಾಂವ್ನಿಂದ ತಿರುವನಂತಪುರಂ ಸೆಂಟ್ರಲ್ಗೆ ವಿಶೇಷ ರೈಲೊಂದನ್ನು ಓಡಿಸಲಾಗಿದ್ದು, ಅದು ಸಂಜೆ 7:30ಕ್ಕೆ ಮಡಗಾಂವ್ ನಿಲ್ದಾಣದಿಂದ ನಿರ್ಗಮಿಸಿದೆ. ಅದೇ ರೀತಿ ಜು.22ರಂದು ಹೊರಟಿದ್ದ ಎರ್ನಾಕುಲಂ-ಎಚ್.ನಿಝಾಮುದ್ದೀನ್ ವಿಶೇಷ ರೈಲನ್ನು ಮಂಗಳೂರು ಜಂಕ್ಷನ್, ಹಾಸನ, ಅರಸಿಕೆರೆ, ಗುಂಟ್ಕಲ್, ವಾಡಿ ಜಂಕ್ಷನ್, ಸೋಲಾಪುರ್ ಮಾರ್ಗವಾಗಿ ಕಳುಹಿಸಿಕೊಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳ ಸಂಚಾರವನ್ನು ರದ್ದುಗೊಳಿಸ ಲಾಗಿದ್ದು, ಆದೇಶವನ್ನು ಹಿಂದೆ ಪಡೆದು ಅವುಗಳ ಸಂಚಾರವನ್ನು ಮತ್ತೆ ಪ್ರಾರಂಭಿಸಲು ಸೆಂಟ್ರಲ್ ರೈಲ್ವೆ, ಸದರ್ನ್ ರೈಲ್ವೆ, ನಾರ್ದರ್ನ್ ರೈಲ್ವೆ ಹಾಗೂ ದಕ್ಷಿಣ ಪಶ್ಚಿಮ ರೈಲ್ವೆಗಳು ನಿರ್ಧರಿಸಿವೆ ಎಂದು ಅದು ಹೇಳಿದೆ.
ಜು. 25ರಿಂದ ಮುಂಬೈ-ಮಂಗಳೂರು ರೈಲು
ಜು.24ರಿಂದ 27ರವರೆಗೆ ರದ್ದುಪಡಿಲಾಗಿದ್ದ ರೈಲು ನಂ.01133 ಮುಂಬೈ ಸಿಎಸ್ಎಂಟಿ- ಮಂಗಳೂರು ಜಂಕ್ಷನ್ ದೈನಂದಿನ ರೈಲಿನ ಸಂಚಾರವನ್ನು ನಾಳೆಯಿಂದ ಪುನರಾರಂಭಿಸಲಾಗುತ್ತದೆ. ಅದೇ ರೀತಿ ರೈಲು ನಂ.01134 ಮಂಗಳೂರು ಜಂಕ್ಷನ್- ಮುಂಬೈ ಸಿಎಸ್ಎಂಟಿ ರೈಲಿನ ಸಂಚಾರವನ್ನು ಜು.25ರಿಂದ 28ರವರೆಗೆ ರದ್ದು ಪಡಿಸಲಾಗಿದ್ದು, ಅದನ್ನು ಜು.26ರಿಂದ ಪುನರಾರಂಭಿ ಸಲಾಗುತ್ತದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.
ಇದೇ ವೇಳೆ ರೈಲು ನಂ.06084 ಎಚ್.ನಿಝಾಮುದ್ದೀನ್- ತಿರುವನಂತಪುರಂ ಸೆಂಟ್ರಲ್ ಸಾಪ್ತಾಹಿಕ ರೈಲಿನ ಜು.26ರ ಪ್ರಯಾಣವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಹಾಗೆಯೇ ರೈಲು ನಂ.02432 ಎಚ್. ನಿಝಾಮುದ್ದೀನ್-ತಿರುವನಂತಪುರಂ ಸೆಂಟ್ರಲ್ ನಡುವೆ ವಾರಕ್ಕೆ ಮೂರು ಬಾರಿ ಸಂಚರಿಸುವ ‘ರಾಜಧಾನಿ’ಯ ಜು.27ರ ಪ್ರಯಾಣವನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಉತ್ತರ ರೈಲ್ವೆ ಪ್ರಕಟಣೆ ತಿಳಿಸಿದೆ.







