ಸೋಮವಾರದಿಂದ ಮಳೆ ಕೊಂಚ ಇಳಿಕೆ ಸಾಧ್ಯತೆ: ಹವಾಮಾನ ಇಲಾಖೆ

ಬೆಂಗಳೂರು, ಜು. 24: ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ ಅಬ್ಬರ ಕೊಂಚ ಇಳಿಮುಖವಾಗಿದ್ದು, ಕರಾವಳಿ, ಮಲೆನಾಡು ಭಾಗದಲ್ಲಿ ಇನ್ನೂ ಎರಡು ದಿನಗಳಾಗಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಜು.28ರ ವರೆಗೆ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಕರಾವಳಿ, ಮಲೆನಾಡಿನಲ್ಲಿ ಕಡಿಮೆ ಒತ್ತಡದ ಪ್ರದೇಶವಿದ್ದು, ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಉಳಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆ ಅಲ್ಲಲ್ಲಿ ಇನ್ನೂ ಮೂರ್ನಾಲ್ಕು ದಿನ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಾಳೆಯಿಂದ ಮಳೆ ಪ್ರಮಾಣ ಇಳಿಕೆಯಾದರೂ ತುಂತುರು ಮಳೆ ಮುಂದುವರೆಯಲಿದೆ. ರಾಜ್ಯದ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಕೆಲವೆಡೆ ಆಗಾಗ್ಗೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ಆಗಸ್ಟ್ 6 ಮತ್ತು 7ರ ನಂತರ ಮತ್ತೆ ಮಳೆ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ನೆರೆಯ ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭ ನದಿ ನೀರಿನ ಹರಿವು ಹೆಚ್ಚಾಗಿದ್ದು, ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ನೈರುತ್ಯ ಮುಂಗಾರು ವಾಡಿಕೆಗಿಂತ ರಾಜ್ಯದಲ್ಲಿ ಕಡಿಮೆಯಾಗಿ ಆತಂಕ ಮೂಡಿಸಿತ್ತು. ಆದರೆ, ವಾರದಿಂದ ನಿರಂತರವಾಗಿ ಬಿದ್ದ ಮಳೆಯಿಂದ ಬಹಳಷ್ಟು ಕಡೆ ಅತಿವೃಷ್ಟಿ ಉಂಟಾಗಿದೆ. ನದಿಗಳಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಜಲಾಶಯಗಳ ಒಳಹರಿವು ಹೆಚ್ಚಾಗಿರುವುದು ಸಮಾಧಾನ ತಂದಿದೆ. ಆದರೆ, ಹಲವೆಡೆ ಬೆಳೆ ನಷ್ಟ, ಮನೆ ಹಾಗೂ ಗುಡ್ಡ ಕುಸಿತ, ರಸ್ತೆ ಹಾನಿಯಂತಹ ಘಟನೆಗಳೂ ಸಂಭವಿಸಿವೆ.







