ತಾಲಿಬಾನ್ ವಿರುದ್ಧದ ಯುದ್ಧಕ್ಕೆ ತಮ್ಮ ವಾಯುಪಡೆ ದುರ್ಬಲ: ಅಫ್ಘಾನ್ ಸಂಸದರ ಕಳವಳ

ಸಾಂದರ್ಭಿಕ ಚಿತ್ರ
ವಾಶಿಂಗ್ಟನ್, ಜು. 24: ತಾಲಿಬಾನ್ ನಡೆಸುತ್ತಿರುವ ದಾಳಿಯ ಪ್ರಮಾಣಕ್ಕೆ ಹೋಲಿಸಿದರೆ ತಮ್ಮ ವಾಯುಪಡೆ ದುರ್ಬಲವಾಗಿದೆ ಎಂಬ ಕಳವಳವನ್ನು ಅಫ್ಘಾನಿಸ್ತಾನದ ಸಂಸದರು ಶುಕ್ರವಾರ ವ್ಯಕ್ತಪಡಿಸಿದ್ದಾರೆ ಹಾಗೂ ಸೇನಾ ವಾಪಸಾತಿಗೆ ಮೊದಲು ಅಫ್ಘಾನಿಸ್ತಾನಕ್ಕೆ ನೀಡುವ ನೆರವಿನ ಪ್ರಮಾಣವನ್ನು ಅಂತಿಮಗೊಳಿಸುವಂತೆ ಅವರು ಅಮೆರಿಕವನ್ನು ಒತ್ತಾಯಿಸಿದ್ದಾರೆ.
ಈ ವಾರ ಅಮೆರಿಕ ಸಂಸತ್ತು ಕಾಂಗ್ರೆಸ್ನೊಂದಿಗೆ ಆನ್ಲೈನ್ ಸಂವಾದ ನಡೆಸಿದ ಅಫ್ಘಾನಿಸ್ತಾನದ ನಿಯೋಗವೊಂದು, ಮುಂದಿನ ತಿಂಗಳ ಕೊನೆಯ ವೇಳೆಗೆ ಅಫ್ಘಾನಿಸ್ತಾನದಲ್ಲಿನ ಅಮೆರಿಕದ ಸುದೀರ್ಘ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿರುವ ಹಿನ್ನೆಲೆಯಲ್ಲಿ, ವಿಮಾನಗಳ ನಿರ್ವಹಣೆ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆ ಬಗ್ಗೆ ಕ್ಷಿಪ್ರ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದೆ.
ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಜೊತೆಗೆ ಶುಕ್ರವಾರ ನಡೆಸಿದ ಫೋನ್ ಸಂಭಾಷಣೆಯಲ್ಲಿ ಬೈಡನ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಶ್ವೇತಭವನವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಫ್ಘಾನಿಸ್ತಾನಕ್ಕೆ ನಿರಂತರ ಸೇನಾ ಬೆಂಬಲವನ್ನು ನೀಡುವ ಭರವಸೆಯನ್ನು ಅಮೆರಿಕ ಅಧ್ಯಕ್ಷರು ಪುನರುಚ್ಚರಿಸಿದರು ಎನ್ನಲಾಗಿದೆ.
‘‘ಅಫ್ಘಾನಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿ ನಿಜವಾಗಿಯೂ ಭಯಾನಕತೆಯತ್ತ ಸಾಗುತ್ತಿದೆ’’ ಎಂದು ಅಫ್ಘಾನಿಸ್ತಾನದ ಹಿರಿಯ ಸಂಸದ ಹಾಜಿ ಅಜ್ಮಲ್ ರಹ್ಮಾನಿ ಅಮೆರಿಕದ ಕಾಂಗ್ರೆಸ್ ಜೊತೆಗಿನ ಸಂವಾದದ ವೇಳೆ ಹೇಳಿದರು.







