ಜಾರ್ಖಂಡ್ ಸರಕಾರ ಉರುಳಿಸಲು ಸಂಚು ಆರೋಪ: ರಾಂಚಿಯಲ್ಲಿ ಮೂವರ ಬಂಧನ
ಬಿಜೆಪಿಯನ್ನು ದೂಷಿಸಿದ ಜಾರ್ಖಂಡ್ ಮುಕ್ತಿ ಮೋರ್ಚಾ

ರಾಂಚಿ: ಜಾರ್ಖಂಡ್‌ನಲ್ಲಿ ಅಧಿಕಾರದಲ್ಲಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಹಾಗೂ ಆರ್‌ಜೆಡಿಯ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಸಂಚು ರೂಪಿಸಿದ್ದಕ್ಕಾಗಿ ರಾಂಚಿಯ ಹೋಟೆಲ್‌ನಿಂದ ಶನಿವಾರ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪಿತೂರಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಜೆಎಂಎಂ ದೂಷಿಸಿದೆ.
ಅವರಲ್ಲಿ ಇಬ್ಬರು ಅಭಿಷೇಕ್ ದುಬೆ ಹಾಗೂ ಅಮಿತ್ ಸಿಂಗ್ ಸರಕಾರಿ ನೌಕರರು ಎಂದು ಮೂಲಗಳು ತಿಳಿಸಿವೆ. ಮೂರನೇ ಆರೋಪಿ ನಿವಾರನ್ ಪ್ರಸಾದ್ ಮಹತೋ ಮದ್ಯ ಮಾರಾಟಗಾರನೆಂದು ನಂಬಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಜಾರ್ಖಂಡ್ ಪೊಲೀಸರ ವಿಶೇಷ ತಂಡವು ಮೂವರು ಆರೋಪಿಗಳಿಂದ ಬಹಿರಂಗಪಡಿಸದ ಹಣವನ್ನು ವಶಪಡಿಸಿಕೊಂಡಿದೆ.
'ಮಧ್ಯಪ್ರದೇಶ' ಹಾಗೂ 'ಕರ್ನಾಟಕ ಮಾದರಿಯನ್ನು' ಜಾರ್ಖಂಡ್ ನಲ್ಲಿ ಕಾರ್ಯಗತಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಜೆಎಂಎಂ ಆರೋಪಿಸಿದೆ. ಎರಡು ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರಗಳು ಹೇಗೆ ಉರುಳಿಸಲ್ಪಟ್ಟವು ಎಂಬುದನ್ನು ಜೆಎಂಎಂ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
" ಕರ್ನಾಟಕ ಹಾಗೂ ಮಧ್ಯಪ್ರದೇಶದ ಮಾದರಿಯನ್ನು ಜಾರ್ಖಂಡ್ ನಲ್ಲಿ ಅನ್ವಯಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ನಾವು ಬಿಜೆಪಿಯನ್ನು ಆ ರೀತಿ ಮಾಡಲು ಅನುಮತಿಸುವುದಿಲ್ಲ" ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಸುಪ್ರಿಯಾ ಭಟ್ಟಾಚಾರ್ಯ ಹೇಳಿದ್ದಾರೆ.
ಜೆಎಂಎಂ, ಕಾಂಗ್ರೆಸ್ ಹಾಗೂ ಆರ್‌ಜೆಡಿಯ ತ್ರಿಪಕ್ಷೀಯ ಮೈತ್ರಿಕೂಟವು 2019 ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ 81 ಸ್ಥಾನಗಳಲ್ಲಿ 47 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಹೇಮಂತ್ ಸೊರೆನ್ ಅವರನ್ನು ನಂತರ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು.







