ಗುಜರಾತ್ ಸಿಲಿಂಡರ್ ಸ್ಫೋಟ ಪ್ರಕರಣ: 4 ಮಕ್ಕಳ ಸಹಿತ 9 ಮಂದಿ ಮೃತ್ಯು

ಅಹ್ಮದಾಬಾದ್, ಜು.24: ಗುಜರಾತ್ನ ಅಹ್ಮದಾಬಾದ್ ನಗರದ ಹೊರವಲಯದ ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡು ಸ್ಫೋಟಿಸಿದ ದುರಂತದಲ್ಲಿ ತೀವ್ರ ಗಾಯಗೊಂಡಿದ್ದ 4 ಮಕ್ಕಳ ಸಹಿತ 9 ಮಂದಿ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶದ ಕುಟುಂಬ ವಾಸಿಸುತ್ತಿದ್ದ ಸಣ್ಣ ಕೋಣೆಯಲ್ಲಿ ಜುಲೈ 20ರಂದು ರಾತ್ರಿ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿದೆ. ಇದನ್ನು ಗಮನಿಸಿದ ನೆರೆಮನೆಯವರು ಕೋಣೆಯ ಬಾಗಿಲು ಬಡಿದು ಎಚ್ಚರಿಸಿದಾಗ ಒಬ್ಬ ಎಚ್ಚರಗೊಂಡು ಕೋಣೆಯ ವಿದ್ಯುತ್ದೀಪದ ಸ್ವಿಚ್ ಅದುಮಿದಾಗ ಕಿಡಿ ಹಾರಿ ಬೆಂಕಿ ಹತ್ತಿಕೊಂಡು ಸಿಲಿಂಡರ್ ಸ್ಫೋಟಿಸಿದೆ. 10 ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗೊಂಡವರಲ್ಲಿ ನೆರೆಮನೆಯವರೂ ಸೇರಿದ್ದರು. ಆದರೆ ಚಿಕಿತ್ಸೆ ಫಲಿಸದೆ 9 ಮಂದಿ ಮೃತರಾಗಿದ್ದಾರೆ.
ಮೃತರನ್ನು ರಾಮ್ಪ್ಯಾರಿ ಅಹಿರ್ವಾರ್(56), ರಾಜುಭಾಯ್ ಅಹಿರ್ವಾರ್(31), ಸೋನು ಅಹಿರ್ವಾರ್(21), ಸೀಮಾ ಅಹಿರ್ವಾರ್(25), ಸರ್ಜು ಅಹಿರ್ವಾರ್(22), ವೈಶಾಲಿ(7), ನಿತೇಶ್(6), ಪಾಯಲ್(4) ಮತ್ತು ಆಕಾಶ್(2) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡಿರುವ ಕುಲ್ಸಿನ್ಹ್ ಭೈರವ್(30) ಪರಿಸ್ಥಿತಿ ಗಂಭೀರವಾಗಿದೆ ಎಂದು ಅಸ್ಲಾಲಿ ಠಾಣೆಯ ಅಧಿಕಾರಿ ಪಿಆರ್ ಜಡೇಜಾ ಹೇಳಿದ್ದಾರೆ.





