ಮಹಾರಾಷ್ಟ್ರ: ಸತಾರ ಜಿಲ್ಲೆಯಲ್ಲಿ ಭೂಕುಸಿತ, 5 ಮೃತದೇಹ ಪತ್ತೆ, ಇನ್ನಷ್ಟು ಸಾವಿನ ಶಂಕೆ

ಮುಂಬೈ: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಅಂಬೇಗರ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ 5 ಮೃತದೇಹ ಪತ್ತೆಯಾಗಿದ್ದು, ಇನ್ನೂ ಕೆಲವರು ಮಣ್ಣಿನಡಿ ಸಿಲುಕಿದ್ದು ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಠಾಣ್ ತಾಲೂಕಿನ ಅಂಬೇಗರ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಿಂದ 5 ಮನೆಗಳು ಮಣ್ಣಿನೊಳಗೆ ಹೂತುಹೋಗಿದ್ದು ಮನೆಯಲ್ಲಿದ್ದ ಕನಿಷ್ಟ 16 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ .
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಇದುವರೆಗೆ 5 ಮೃತದೇಹ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಥಳೀಯ ಪೊಲೀಸರು, ಸ್ಥಳೀಯರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ ಎಂದು ಸತಾರಾ ಪೊಲೀಸ್ ಅಧೀಕ್ಷಕ ಅಜಯ್ ಕುಮಾರ್ ಬನ್ಸಾಲ್ ಹೇಳಿದ್ದಾರೆ. ಇದೇ ಪ್ರದೇಶದ ಗ್ರಾಮಗಳಾದ ಮೀರ್ಗಾಂವ್ ಹಾಗೂ ಡೋಕಾವಾಲೆ ಗ್ರಾಮದಲ್ಲೂ ಭೂಕುಸಿತ ಸಂಭವಿಸಿದ್ದು ಅನುಕ್ರಮವಾಗಿ 12 ಮತ್ತು 4 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆಯಿದೆ ಎಂದು ಮೂಲಗಳು ಹೇಳಿವೆ.
ಈ ಮೂರು ಗ್ರಾಮಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸುಮಾರು 30 ಮಂದಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆಯಿದೆ ಎಂದು ಸತಾರಾ ಜಿಲ್ಲಾಧಿಕಾರಿ ಶೇಖರ್ ಸಿಂಗ್ ಶುಕ್ರವಾರ ಹೇಳಿದ್ದರು.





