ದೇಶದ್ರೋಹ ಕಾನೂನು ದುರ್ಬಳಕೆ; ರದ್ದತಿಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಸಲಹೆ

ಹೊಸದಿಲ್ಲಿ: ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಸಲುವಾಗಿ ಮತ್ತು ಸರ್ಕಾರಕ್ಕೆ ಪ್ರಶ್ನೆ ಕೇಳುವ ಧ್ವನಿಗಳನ್ನು ಅಡಗಿಸುವ ಉದ್ದೇಶದಿಂದ ದುರ್ಬಳಕೆಯಾಗುತ್ತಿರುವ ದೇಶದ್ರೋಹ ಕಾಯ್ದೆಯ ಶಿಕ್ಷಾರ್ಹ ನಿಬಂಧನೆಗಳು ಮತ್ತು ಕರಾಳ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಗಳನ್ನು ರದ್ದುಪಡಿಸುವುದು ಸೂಕ್ತ ಎಂದು ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
"ಯುಎಪಿಎ ರಾಷ್ಟ್ರೀಯ ಭದ್ರತೆ ಹಾಗೂ ಸಂವಿಧಾನಾತ್ಮಕ ಸ್ವಾತಂತ್ರ್ಯ ಹೀಗೆ ಎರಡೂ ಆಯಾಮಗಳಲ್ಲಿ ವಿಫಲವಾಗಿದೆ ಎಂದು ನಾನು ದೃಢವಾಗಿ ಹೇಳಬಲ್ಲೆ" ಎಂದು ನಿವೃತ್ತ ನ್ಯಾಯಮೂರ್ತಿ ಅಲ್ತಾಫ್ ಆಲಂ ಹೇಳಿದ್ದಾರೆ.
ಯುಎಪಿಎ ಕಾಯ್ದೆಯಡಿ ಸೆರೆಮನೆ ವಾಸ ಅನುಭವಿಸುತ್ತಿದ್ದ ವೇಳೆಯೇ ಮೃತಪಟ್ಟ 84 ವರ್ಷ ವಯಸ್ಸಿನ ಸ್ಟ್ಯಾನ್ ಸ್ವಾಮಿ ಪ್ರಕರಣವನ್ನು ಅವರು ಉಲ್ಲೇಖಿಸಿದರು.
"ಪ್ರಜಾಪ್ರಭುತ್ವ, ಭಿನ್ನಾಭಿಪ್ರಾಯ ಮತ್ತು ಕರಾಳ ಕಾನೂನುಗಳು- ಯುಎಪಿಎ ಮತ್ತು ದೇಶದ್ರೋಹ ಕಾಯ್ದೆಗಳಿಗೆ ಕಾನೂನು ಪುಸ್ತಕದಲ್ಲಿ ಜಾಗ ಇರಬೇಕೇ" ಎಂಬ ಸಾರ್ವಜನಿಕ ಚರ್ಚೆಯಲ್ಲಿ ಮಾತನಾಡಿದ ಅಲ್ತಾಫ್ ಆಲಂ, ದೀಪಕ್ ಗುಪ್ತಾ, ಮದನ್ ಬಿ. ಲೋಕೋರ ಮತ್ತು ಗೋಪಾಲ ಗೌಡ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂಥ ಹಲವು ಪ್ರಕರಣಗಳಲ್ಲಿ ವಿಚಾರಣಾ ಪ್ರಕ್ರಿಯೆಯೇ ಶಿಕ್ಷೆಯಾಗಿ ಪರಿಣಮಿಸುತ್ತದೆ ಎಂದು ಅಲ್ತಾಫ್ ಆಲಂ ವಿಷಾದಿಸಿದರು. ಯಾರನ್ನು ತಪ್ಪಾಗಿ ಸಿಲುಕಿಸಲಾಗಿದೆ ಹಾಗೂ ಅವರನ್ನು ಆ ಬಳಿಕ ದೋಷಮುಕ್ತಗೊಳಿಸಲಾಗುತ್ತದೆಯೋ ಅಂಥವರಿಗೆ ಪರಿಹಾರ ನೀಡುವ ವ್ಯವಸ್ಥೆ ಅಗತ್ಯ ಎಂದು ನ್ಯಾಯಮೂರ್ತಿ ಲೋಕೂರ ಪ್ರತಿಪಾದಿಸಿದರು.
ಇಂಥ ಕರಾಳ ಕಾನೂನುಗಳಿಗೆ ಪ್ರಜಾಪ್ರಭುತ್ವದಲ್ಲಿ ಜಾಗ ಇಲ್ಲ ಎಂದು ನ್ಯಾಯಮೂರ್ತಿ ಗುಪ್ತಾ ಅಭಿಪ್ರಾಯಪಟ್ಟರು. ಶಾಸನಗಳು ಈಗ ಭಿನ್ನಾಭಿಪ್ರಾಯ ವಿರುದ್ಧದ ಅಸ್ತ್ರವಾಗಿದ್ದು, ಇವುಗಳನ್ನು ರದ್ದುಪಡಿಸುವುದು ಅಗತ್ಯ ಎಂದು ನ್ಯಾಯಮೂರ್ತಿ ಗೋಪಾಲಗೌಡ ಪ್ರತಿಪಾದಿಸಿದರು.







