ಪೆಗಾಸಸ್ :ಕಣ್ಗಾವಲು ಆರೋಪ ಕುರಿತು ತನಿಖೆಗೆ ಕೋರಿ ಸುಪ್ರೀಂ ಮೆಟ್ಟಿಲೇರಿದ ರಾಜ್ಯಸಭಾ ಸದಸ್ಯ

ಹೊಸದಿಲ್ಲಿ,ಜು.25: ಸರಕಾರಿ ಏಜೆನ್ಸಿಗಳು ಪೆಗಾಸಸ್ ಸ್ಪೈವೇರ್ ಅನ್ನು ಬಳಸಿ ಕಣ್ಗಾವಲು ಕಾರ್ಯದಲ್ಲಿ ತೊಡಗಿವೆ ಎಂಬ ಆರೋಪಗಳ ಬಗ್ಗೆ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆಯನ್ನು ಕೋರಿ ಸಿಪಿಎಂ ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.
ವಿಶ್ವಾದ್ಯಂತ 50,000ಕ್ಕೂ ಅಧಿಕ ದೂರವಾಣಿಗಳು ಪೆಗಾಸಸ್ ಸ್ಪೈವೇರ್ ಮೂಲಕ ಕಣ್ಗಾವಲಿಗೊಳಗಾಗಿದ್ದವು ಎಂಬ ಸುದ್ದಿಯನ್ನು ಸ್ಫೋಟಿಸಿದ್ದ ಪ್ಯಾರಿಸ್ ನ ಫಾರ್ಬಿಡನ್ ಸ್ಟೋರೀಸ್ ಮತ್ತು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಗೆ ಲಭ್ಯವಾಗಿರುವ ಪಟ್ಟಿಯಲ್ಲಿ ಭಾರತೀಯರ ದೂರವಾಣಿ ಸಂಖ್ಯೆಗಳೂ ಇವೆ.
40ಕ್ಕೂ ಅಧಿಕ ಪತ್ರಕರ್ತರು,ಇಬ್ಬರು ಕೇಂದ್ರ ಸಚಿವರು,ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,ಮಾಜಿ ಚುನಾವಣಾ ಆಯುಕ್ತ ಅಶೋಕ ಲವಾಸಾ ಮತ್ತು ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರು ಲೈಂಗಿಕ ಕಿರುಕುಳವನ್ನು ನೀಡಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಸುಪ್ರೀಂ ಕೋರ್ಟ್ ಸಿಬ್ಬಂದಿಯ ದೂರವಾಣಿ ಸಂಖ್ಯೆಗಳು ಇವುಗಳಲ್ಲಿ ಸೇರಿವೆ. ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಮಾಜಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರೂ ಸಂಭಾವ್ಯ ಗುರಿಗಳಾಗಿದ್ದಾರೆ ಎನ್ನಲಾಗಿದೆ.
ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದರೂ ಕೇಂದ್ರವು ಆ ಬಗ್ಗೆ ತನಿಖೆಗೆ ಕಾಳಜಿಯನ್ನು ವಹಿಸಿಲ್ಲ. ಬದಲಿಗೆ ದೇಶದಲ್ಲಿ ಅನಧಿಕೃತ ಕಣ್ಗಾವಲು ನಡೆಯುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ ಎಂದಷ್ಟೇ ಕೇಂದ್ರವು ಹೇಳಿದೆ ಎಂದು ಅರ್ಜಿಯಲ್ಲಿ ತಿಳಿಸಿರುವ ಬ್ರಿಟಾಸ್, ಹೀಗಾಗಿ ಸೋರಿಕೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಲಾಗಿತ್ತು. ಆದರೆ ಸ್ಪೈವೇರ್ ಮೂಲಕ ಬೇಹುಗಾರಿಕೆಯನ್ನು ಸರಕಾರವು ನಿರಾಕರಿಸಿಯೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ ಎಂದು ಹೇಳಿದ್ದಾರೆ.
ಅನಧಿಕೃತ ಕಣ್ಗಾವಲು ನಡೆದಿಲ್ಲ ಎಂದು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿರುವ ಬ್ರಿಟಾಸ್,ಇದು ಕಣ್ಗಾವಲು ಅಧಿಕೃತವಾಗಿತ್ತೇ ಎಂಬ ಪ್ರಶ್ನೆಯನ್ನೆತ್ತಿದೆ ಎಂದು ಹೇಳಿದ್ದಾರೆ. ಇದು ಸರಕಾರದಿಂದ ನುಣುಚಿಕೊಳ್ಳುವ ಹೇಳಿಕೆಯಾಗಿದೆ.
ಸ್ಪೈವೇರ್ ಒಡೆತನ ಹೊಂದಿರುವ ಇಸ್ರೇಲಿನ ಎನ್ಎಸ್ಒ ಕಂಪನಿಯ ಹೇಳಿಕೆಯನ್ನು ಸರಕಾರವು ಕುರುಡಾಗಿ ಒಪ್ಪಿಕೊಂಡಿದೆ,ಆ ಬಗ್ಗೆ ಯಾವುದೇ ತನಿಖೆಯನ್ನು ನಡೆಸಿಲ್ಲ ಎಂದಿರುವ ಬ್ರಿಟಾಸ್,ಇದು ಭಾರತೀಯ ಪ್ರಜೆಗಳ ಖಾಸಗಿತನದ ಮೂಲಭೂತ ಹಕ್ಕುಗಳನ್ನು ಮತ್ತು ಸರಕಾರದ ಕಣ್ಗಾವಲು ಅಧಿಕಾರದ ದುರುಪಯೋಗವನ್ನು ಒಳಗೊಂಡಿರುವ ವಿಷಯವಾಗಿದೆ. ಹೀಗಾಗಿ ಈ ಬಗ್ಗೆ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆಗೆ ಆದೇಶಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ.







