ಅಡೆತಡೆಗಳ ನಡುವೆಯೂ ಯಡಿಯೂರಪ್ಪ ಉತ್ತಮವಾಗಿ ಆಡಳಿತ ನಡೆಸಿದ್ದಾರೆ: ಸಚಿವ ಡಾ. ಸುಧಾಕರ್

ಬೆಂಗಳೂರು, ಜು. 25: `ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದು ನಾಳೆಗೆ ಎರಡು ವರ್ಷ ಪೂರೈಸುತ್ತದೆ. ನಾಳೆ ಅತ್ಯಂತ ಮಹತ್ವದ ದಿನ. ಅನೇಕ ಅಡೆತಡೆಗಳ ನಡುವೆಯೂ ಯಡಿಯೂರಪ್ಪನವರು ಅತ್ಯುತ್ತಮವಾಗಿ ಸರಕಾರ ಮುನ್ನಡೆಸಿಕೊಂಡು ಬಂದಿದ್ದಾರೆ' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಎಲ್ಲ ಹಿರಿಯ ನಾಯಕರ ರಾಜ್ಯದ ಸಚಿವರ, ಶಾಸಕರು, ವಿರೋಧ ಪಕ್ಷದವರ ಮತ್ತು ಅಧಿಕಾರಿ ವರ್ಗದವರ ಸಹಕಾರದಿಂದ ಎರಡು ವರ್ಷ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಿದ್ದಾರೆ' ಎಂದು ತಿಳಿಸಿದರು.
`ನಾನು ನಾಯಕತ್ವ ಬದಲಾವಣೆ ಬಗ್ಗೆ ಮಾತಾನಾಡುವಷ್ಟು ದೊಡ್ಡವನಲ್ಲ. ನಾನು ಇನ್ನೂ ಸಣ್ಣವನು, ಆ ಬಗ್ಗೆ ಹಿರಿಯರು ಮಾತಾನಾಡುತ್ತಾರೆ. ಸಿಎಂ ಸೂಚನೆಯಂತೆ ನಾನು ನನ್ನ ಕೆಲಸ ಮಾಡ್ತಿದ್ದೀನಿ' ಎಂದ ಅವರು, `ಕೋವಿಡ್ ನಿರ್ವಹಣೆಯಾಗಲಿ, ಎರಡು ಬಾರಿ ನೆರೆ ಸಮಯದಲ್ಲಿ ಸಿಎಂ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ' ಎಂದು ಇದೇ ಸಂದರ್ಭದಲ್ಲಿ ನುಡಿದರು.





