ಕರ್ನಾಟಕ ಸಿಎಂ ಯಡಿಯೂರಪ್ಪ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ: ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ

ಪಣಜಿ: ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕುರಿತು ಹಲವಾರು ಊಹಾಪೋಹಗಳು ಕೇಳಿ ಬರುತ್ತಿರುವ ನಡುವೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, "ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕವು ಉತ್ತಮವಾಗಿ ಮುನ್ನಡೆಯುತ್ತಿದೆ" ಎಂದು ಹೇಳಿಕೆ ನೀಡಿದ್ದಾರೆ.
"ಯಡಿಯೂರಪ್ಪ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಕರ್ನಾಟವು ಚೆನ್ನಾಗಿ ಮುಂದೆ ಸಾಗುತ್ತಿದೆ. ಯಡಿಯೂರಪ್ಪರಿಗೆ ಅವರದೇ ಆದ ಶೈಲಿಯಲ್ಲಿ ಕಾರ್ಯ ನಿರ್ವಹಿಸುವುದು ತಿಳಿದಿದೆ" ಎಂದು ಹೇಳಿದರು. ಗೋವಾಗೆ 2 ದಿನಗಳ ಭೇಟಿ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ದಕ್ಷಿಣದ ರಾಜ್ಯಗಳಲ್ಲಿ ನಾಯಕತ್ವ ಬಿಕ್ಕಟ್ಟುಗಳ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, "ಬಿಕ್ಕಟ್ಟು ಇದೆ ಎಂದು ನೀವು ನಂಬುತ್ತೀರೇ ಹೊರತು ನಾವಲ್ಲ" ಎಂದು ಹೇಳಿದರು. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುವುದು ಎಂಬ ವದಂತಿಗಳ ನಡುವೆ "ನಾನು ಅಧಿಕಾರದ ಕೊನೆಯ ಕ್ಷಣದವರೆಗೂ ಕಾರ್ಯ ನಿರ್ವಹಿಸುತ್ತೇನೆ. ನನಗೆ ಹೈಕಮಾಂಡ್ ನಿಂದ ಯಾವುದೇ ಸಂದೇಶಗಳು ಬಂದಿಲ್ಲ" ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದರು.





