ಬೆಂಗಳೂರಿನಲ್ಲಿ ಮಠಾಧೀಶರ ಸಮಾವೇಶ: ಯಡಿಯೂರಪ್ಪರನ್ನು ಸಿಎಂ ಆಗಿ ಮುಂದುವರಿಸಲು ಒತ್ತಾಯ
"ಬಿಎಸ್ ವೈ ವಿರುದ್ಧ ಸ್ವಪಕ್ಷೀಯರಿಂದಲೇ ಕುತಂತ್ರ"

ಬೆಂಗಳೂರು, ಜು. 25: ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರು ಬಿ.ಎಸ್.ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಕೈಬಿಡಬಾರದೆಂದು ರಾಜ್ಯ ವಿವಿಧ ಮಠಗಳ ಮಠಾಧೀಶರು ಒಕ್ಕೂರಲಿನಿಂದ ಆಗ್ರಹಿಸಿದ್ದಾರೆ.
ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ `ವರ್ತಮಾನದ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಮಠಾಧೀಶರ ಮಹಾ ಸಮಾವೇಶ'ದಲ್ಲಿ ಸುಮಾರು 500ಕ್ಕೂ ಅಧಿಕ ಮಠಾಧೀಶರು ಪಾಲ್ಗೊಂಡು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ನಿರ್ಣಯ ಕೈಗೊಂಡರು
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, `ಸ್ವಾಮೀಜಿಗಳೆಲ್ಲರೂ ಜಾತಿವಾದಿಗಳು ಎಂಬ ಭಾವನೆ ತಾಳಬಾರದು. ಸಂವಿಧಾನದ ಪ್ರಕಾರ, ಪಕ್ಷಾತೀತ ಹಾಗೂ ಜಾತ್ಯತೀತ ನಮ್ಮ ನಿಲುವುಗಳು, ಮಠಾಧೀಶರು ಜಾತಿಯ ಒಳಗೆಯಿದ್ದು, ಜಾತಿಯನ್ನು ಮೀರಿ ಕೆಲಸ ಮಾಡುತ್ತೇವೆ' ಎಂದು ಇದೇ ಸಂದರ್ಭದಲ್ಲಿನುಡಿದರು.
`75 ವರ್ಷ ತುಂಬಿದರೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಎಲ್ಲಾ ರೀತಿಯ ಅವಕಾಶ ನೀಡಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪನವರು ಹೇಳುತ್ತಿದ್ದಾರೆ. ಹಾಗಾಗಿ ನಾವು ಆ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅದರ ಜೊತೆ ಮುಂದೆ ಏನು ಎಂದು ಪ್ರಶ್ನೆ ಮಾಡುತ್ತೇವೆ' ಎಂದು ಶರಣರು ತಿಳಿಸಿದರು.
`ಇನ್ನು, ರಾಜಕಾರಣಿ, ಮುಖ್ಯಮಂತ್ರಿ ಪದವಿ ನಮ್ಮ ನಿಮ್ಮ ಆಸ್ತಿಯಲ್ಲ. ಅದು ಸಾರ್ವಜನಿಕ ಆಸ್ತಿ' ಎಂದ ಅವರು, `ಅಭಿವೃದ್ಧಿ ಪರವಾದ ರಾಜಕಾರಣ ಮಾಡುವ ಸಂದರ್ಭದಲ್ಲಿ ಸಮಸ್ಯೆ ಬರುವುದು ಸಹಜ. ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತಾರೆ. ನಾಯಕತ್ವದ ಬಿಕ್ಕಟ್ಟು ಶುರುವಾಗಿದೆ. ಮುಂದೆ ಯಾರು ನಾಯಕರಾಗ ಬೇಕು ಎಂಬ ವಿಚಾರದಲ್ಲಿ ಸ್ಪಷ್ಟತೆ ಕಂಡು ಬರುತ್ತಿಲ್ಲ. ಶಾಸಕರು ಅದನ್ನು ನಿರ್ಧಾರಿಸುತ್ತಾರೆ' ಎಂದು ತಿಳಿಸಿದರು.
`ಸಾಮಾಜಿಕ ಧಾರ್ಮಿಕ ಐಕ್ಯತೆ ತೋರಿಸಲು ಈ ಸಮಾವೇಶ ಆಯೋಜಿಸಲಾಗಿದೆ.ಇಂದು ರಾಜಕೀಯ ಅಸ್ಥಿರತೆ ಉಂಟಾಗಿದೆ.ನಾವು ಆದೇಶ ಮಾಡುವ, ಅನುಷ್ಠಾನಕ್ಕೆ ತರುವ ಸ್ಥಾನದಲ್ಲಿಲ್ಲ.ಅದನ್ನೆಲ್ಲ ಆಳುವವರು ಮಾಡಬೇಕಿದೆ. ಆದರೆ ನಮ್ಮ ಬೇಡಿಕೆಯನ್ನ ನಾವು ಮುಂದಿಡಬಹುದು. ಆದಷ್ಟು ಬೇಗ ರಾಜಕೀಯ ಅಸ್ಥಿರತೆ ಕಾಣಬೇಕು' ಎಂದು ಮುರುಘಾ ಶರಣರು ತಿಳಿಸಿದರು.
ಬಾಳೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, `ಸ್ವಪಕ್ಷದವರಿಂದ ಹಾಗೂ ಜಾತಿವಾದಿಗಳಿಂದ ಯಡಿಯೂರಪ್ಪನವರ ವಿರುದ್ಧ ಕುತಂತ್ರ ನಡೆಯುತ್ತಿದೆ. ಅಂಥವರ ವಿರುದ್ಧ ಬಿಜೆಪಿ ರಾಷ್ಟ್ರೀಯ ನಾಯಕರು ಮೊದಲು ಕ್ರಮ ಕೈಗೊಳ್ಳಲಿ' ಎಂದು ಒತ್ತಾಯ ಮಾಡಿದರು.
`ನಿರಪರಾಧಿಗಳಿಗೆ ಯಾವುದೇ ರೀತಿ ತೊಂದರೆಯಾಗಬಾರದು. ಸ್ವಪಕ್ಷದವರ, ಜಾತಿವಾದಿಗಳ ಕುತಂತ್ರಕ್ಕೆ ಬಲಿಯಾಗಬಾರದು. ಈ ನಿಟ್ಟಿನಲ್ಲಿ ಹೈಕಮಾಂಡ್ ಚಿಂತನೆ ನಡೆಸಬೇಕು' ಎಂದ ಅವರು, `ಯಾರೋ ಕಟ್ಟಿದ ಮನೆಯಲ್ಲಿ ಯಾರೋ ಇರುವುದು ಅಲ್ಲ. ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ವಾಸ ಮಾಡೋದು ಅಲ್ಲ. ಯಡಿಯೂರಪ್ಪ ಕಟ್ಟಿರುವ ಮನೆಯಲ್ಲಿ ಬೇರೆಯವರು ಇರುವುದು ಸೂಕ್ತವಲ್ಲ' ಎಂದು ಪರೋಕ್ಷವಾಗಿ ವಿರೋಧಿ ಬಣದ ವಿರುದ್ಧ ಸ್ವಾಮೀಜಿ ವಾಗ್ದಾಳಿ ನಡೆಸಿದರು.
`ಇನ್ನು, ಸಮಾವೇಶದಲ್ಲಿ ಕೋವಿಡ್ ಮೂರನೆ ಅಲೆಯ ಬಗ್ಗೆ ಜಾಗೃತಿ ಮೂಡಿಸುವುದು. ಕೋವಿಡ್ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಆಶ್ರಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ದುಂಡು ಮೇಜಿನ ಸಭೆಯಲ್ಲಿ ಚರ್ಚೆ ನಡೆಸಲಾಯಿತು'. ಈ ಸಂದರ್ಭದಲ್ಲಿ ಶಿರಸಿ ಬಣ್ಣದಮಠದ ಶಿವಲಿಂಗಸ್ವಾಮೀಜಿ, ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಸ್ವಾಮೀಜಿ, ಶಿವಗಂಗೆ ಮೇಲನಗವಿಮಠದ ಮಲಯ ಶಾಂತಮುನಿ ಶಿವಾಚಾರ್ಯರು, ನುಲಿಯ ಚಂದಯ್ಯ ಪೀಠದ ಋಷಬೇಂದ್ರ ಸ್ವಾಮೀಜಿ, ಶಿವಗಂಗೆ ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ ಸೇರಿದಂತೆ ಪ್ರಮುಖರಿದ್ದರು.
ಸಿದ್ದರಾಮಯ್ಯಗೂ ಬೆಂಬಲ ನೀಡಿದ್ದೆ: `ಏಳು ವರ್ಷಗಳ ಹಿಂದೆ ಅಹಿಂದಾ ಚಳವಳಿ ನಡೆಯಿತು. ಜಾತಿಬೇಧವನ್ನು ಮರೆತು ನಾನು ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದ್ದೆ. ಮಠಾಧೀಶರಿಗೆ ಅಭಿಮಾನಕ್ಕಿಂತ, ಜಾತ್ಯತೀತ ಭಾವನೆ ಮುಖ್ಯ. ನಮಗೆ ಆ ರೀತಿ ಮಾತನಾಡಲು ಹಕ್ಕುಗಳಿವೆ'
-ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠ ಚಿತ್ರದುರ್ಗ
`ಹಲವರು ಸಮರ್ಥರಿದ್ದಾರೆ: ಯಡಿಯೂರಪ್ಪ ಬದಲಾದರೆ, ವೀರಶೈವ ಲಿಂಗಾಯತ ಸಮುದಾಯದ ನಾಯಕರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು. ಇನ್ನು, ಈ ಸಮುದಾಯದ ಬಸವರಾಜ ಬೊಮ್ಮಾಯಿ, ಮುರುಗೇಶ್ ಆರ್.ನಿರಾಣಿ, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ ಮುಖ್ಯಮಂತ್ರಿ ಹುದ್ದೆಗೆ ಸಮರ್ಥರಿದ್ದಾರೆ.
-ಮಲ್ಲಿಕಾರ್ಜುನ ಸ್ವಾಮೀಜಿ, ಧಾರವಾಡದ ಮುರುಘಾ ಮಠ
`ಎಲ್ಲರ ನಾಯಕ ಯಡಿಯೂರಪ್ಪ': `ಯಡಿಯೂರಪ್ಪ ಕೇವಲ ಲಿಂಗಾಯತ ನಾಯಕರಲ್ಲ, ಸರ್ವ ಜನಾಂಗದ ಪ್ರೀತಿ ಗಳಿಸಿರುವ ನಾಯಕ. ಅವರಿಗೆ ವಯಸ್ಸಾಗಿದೆ ಎಂಬ ಕಾರಣ ನೀಡಿ ಅಧಿಕಾರದಿಂದ ಕೆಳಗಿಳಿಸುವುದು ಸರಿಯಲ್ಲ. ಅವರನ್ನೆ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಬೇಕು'
-ವೀರಭದ್ರ ಚೆನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ






.jpg)
.jpg)

