ಎನ್‍ಎಲ್‍ಎಸ್‍ಎ ಸದಸ್ಯರಾಗಿ ಹೈಕೋರ್ಟ್ ನ್ಯಾ.ಅರವಿಂದ್‍ಕುಮಾರ್ ನೇಮಕ
ಬೆಂಗಳೂರು, ಜು.25: ಕರ್ನಾಟಕ ಹೈಕೋರ್ಟ್‍ನ ಹಿರಿಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಅರವಿಂದ್ ಕುಮಾರ್ ಅವರನ್ನು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ(ಎನ್‍ಎಲ್‍ಎಸ್‍ಎ)ದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಕುರಿತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಆದೇಶ ಹೊರಡಿಸಿದೆ. ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಜೊತೆ ಸಮಾಲೋಚನೆ ನಡೆಸಿದ ನಂತರ ಎನ್‍ಎಲ್‍ಎಸ್‍ಎಗೆ ನೂತನ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಇದರಲ್ಲಿ ರಾಜ್ಯದ ನ್ಯಾ.ಅರವಿಂದ್ ಕುಮಾರ್ ಕೂಡ ಸ್ಥಾನ ಪಡೆದಿದ್ದಾರೆ.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಲ್ಲಿ ಬಹುತೇಕ ಈವರೆಗೆ ಕರ್ನಾಟಕದ ಮುಖ್ಯ ನ್ಯಾಯಮೂರ್ತಿ ಆಗಿದ್ದವರು ಹೊರತುಪಡಿಸಿ ಯಾರೊಬ್ಬರೂ ನೇಮಕಗೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ರಾಜ್ಯದ ನ್ಯಾಯಮೂರ್ತಿಯೊಬ್ಬರಿಗೆ ಅವಕಾಶ ದೊರೆತಿರುವುದು ರಾಜ್ಯಕ್ಕೂ ಹೆಮ್ಮೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ರಂಗನಾಥ್ ಹೇಳಿದ್ದಾರೆ.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ನ್ಯಾ, ಅರವಿಂದ್ ಕುಮಾರ್ ಅವರ ಸೇವೆ ರಾಷ್ಟ್ರಮಟ್ಟದಲ್ಲಿ ಹೆಸರಾಗಿದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿಯೂ ಇವರ ನೇತೃತ್ವದಲ್ಲಿ ನಡೆದಿದ್ದ ಮೆಗಾ ಲೋಕ್ ಅದಾಲತ್‍ಗಳ ಮೂಲಕ ಲಕ್ಷಾಂತರ ಪ್ರಕರಣಗಳು ಇತ್ಯರ್ಥಗೊಂಡಿವೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿ ಲೋಕ ಅದಾಲತ್ ನಲ್ಲೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಂಡಿವೆ. ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗುವ ಜತೆಗೆ ನ್ಯಾಯಾಲಯದ ಮೇಲಿನ ಪ್ರಕರಣಗಳ ಹೊರೆಯೂ ಕಡಿತಗೊಂಡಿದೆ. ಲೋಕ ಅದಾಲತ್‍ಗೆ ಸಿಕ್ಕ ಈ ಯಶಸ್ಸಿನ ಹಿಂದೆ ನ್ಯಾ, ಅರವಿಂದ್ ಕುಮಾರ್ ಸಾರಥ್ಯ ಬಹುಮುಖ್ಯ ಪಾತ್ರ ವಹಿಸಿದೆ.







