ಮಂಗಳೂರು: ನಿಂತಿದ್ದ ಕಾರಿಗೆ ಓಮ್ನಿ ಢಿಕ್ಕಿ; ಮೂವರಿಗೆ ಗಾಯ

ಮಂಗಳೂರು, ಜು.25: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಓಮ್ನಿ ಕಾರೊಂದು ಢಿಕ್ಕಿ ಹೊಡೆದ ಘಟನೆ ನಗರದ ಕುಲಶೇಖರದ ಸೌಜನ್ಯ ಲೈನ್ ಸಮೀಪ ನಡೆದಿದೆ.
ಮಂಗಳೂರಿನ ನಿವಾಸಿಗಳಾದ ಪವನ್ ಶೆಟ್ಟಿ, ಹರೀಶ್, ಪೃಥ್ವಿರಾಜ್ ಶೆಟ್ಟಿ ಎಂಬವರು ಗಾಯಗೊಂಡಿದ್ದಾರೆ.
ಪ್ರಕರಣದ ವಿವರ: ಜು.18ರಂದು ಸಂಜೆ 4 ಗಂಟೆಯ ಸುಮಾರಿಗೆ ಬಿಕರ್ನಕಟ್ಟೆಯಿಂದ ದತ್ತ ನಗರದ ಕಡೆಗೆ ತೆರಳುತ್ತಿದ್ದ ಓಮ್ನಿ ಕಾರು ಕುಲಶೇಖರದ ಸೌಜನ್ಯ ಲೈನ್ ಸಮೀಪಿಸಿ, ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮುಂಭಾಗಕ್ಕೆ ಓಮ್ನಿ ಢಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಬಹುತೇಕ ಜಖಂಗೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯಲ್ಲಿ ಓಮ್ನಿ ಚಾಲಕ ಪವನ್ ಶೆಟ್ಟಿ, ಹರೀಶ್, ಪೃಥ್ವಿರಾಜ್ ಶೆಟ್ಟಿ ಗಾಯಗೊಂಡಿದ್ದಾರೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಪಘಾತಕ್ಕೆ ಓಮ್ನಿ ಚಾಲಕ ಪವನ್ ಶೆಟ್ಟಿ ಅವರ ನಿರ್ಲಕ್ಷ್ಯವೇ ಕಾರಣ, ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಲಶೇಖರದ ಕೌಸರ್ ಸಂಶುದ್ದೀನ್ ಎಂಬವರು ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.












