ಏತನೀರಾವರಿ ಹಿಂದೆ ಒಳ ಸಂಚು: ಪ್ರತಾಪ್ ಚಂದ್ರ ಶೆಟ್ಟಿ ಆರೋಪ
ಕುಂದಾಪುರದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಸಭೆ

ಕುಂದಾಪುರ ಜು.25: ಕಳೆದ 42 ವರ್ಷಗಳಿಂದ ವಾರಾಹಿ ಎಡದಂಡೆ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇನ್ನು ಪೂರ್ಣವಾಗಿಲ್ಲ. ಕಾಲುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವುದಿಲ್ಲ ಎಂಬ ಕಾರಣಕ್ಕಾಗಿ ಏತ ನೀರಾವರಿ ಮಾಡುವುದರ ಹಿಂದೆ ಒಳಸಂಚು ಅಡಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರೈತ ಸಂಘ ಉಡುಪಿ ಜಿಲ್ಲಾಧ್ಯಕ್ಷ ಕೆ.ಪ್ರತಾಪ ಚಂದ್ರ ಶೆಟ್ಟಿ ಆರೋಪಿಸಿದ್ದಾರೆ.
ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ವತಿಯಿಂದ ಬೀಜಾಡಿ, ಕೋಟೇಶ್ವರ ಜಿಪಂ ವ್ಯಾಪ್ತಿಯ 13 ಗ್ರಾ.ಪಂಗಳ ಮತ್ತು ಕುಂದಾಪುರ ಪುರಸಭೆ ವ್ಯಾಪ್ತಿಯ ರೈತರ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಯೋಜನೆಯ ಅಸಮಪರ್ಕ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಮೂಲ ನಕ್ಷೆಯಲ್ಲಿ ಇರುವಂತೆ ಎಲ್ಲ ಗ್ರಾಮಗಳಿಗೆ ನೀರು ನೀಡಬೇಕು. ಆ ಕುರಿತು ಗ್ರಾಪಂ ಮಾಹಿತಿ ನೀಡಬೇಕು. ಯೋಜನೆ ಯಿಂದ ಕೆಲವು ಗ್ರಾಮಗಳನ್ನು ಯಾಕೆ ಕೈ ಬಿಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ವಾರಾಹಿ ನೀರಾವರಿ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ್ ಮಾತನಾಡಿ, 72 ಕಿ.ಮೀ. ಇದ್ದ ಕಾಲುವೆಯನ್ನು 42 ಕಿ.ಮೀ.ಗೆ ಸೀಮಿತ ಗೊಳಿಸಲಾಗಿದೆ. ಇದರಲ್ಲಿ 38 ಕಿ.ಮೀ. ಕಾಮಗಾರಿ ಮುಗಿಸಲಾಗಿದೆ. ಉಳಿದ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಬಳಿಕ ಇದರ ಉಪಕಾಲುವೆ ಕಾಮಗಾರಿ ಕೂಡ ನಡೆಯಲಿದ್ದು, ಇದರಿಂದ ಆನಗಳ್ಳಿ, ಕೋಣಿ, ಬಸ್ರೂರು, ಕಂದಾವರ, ಬಳ್ಕೂರು ಹಂಗಳೂರು, ಕೋಟೇಶ್ವರ, ಬೀಜಾಡಿ, ಗೋಪಾಡಿ, ಉಳ್ತೂರು, ಕುಂಭಾಸಿಯ 5,440 ಹೆಕ್ಟೇರ್ ಕೃಷಿ ಭೂಮಿಗೆ ನೀರು ದೊರೆಯಲಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 55 ಕೋಟಿ ರೂ. ಮಂಜೂರಾತಿ ಹಂತದಲ್ಲಿ ಇದೆ. 2 ವಾರಗಳಲ್ಲಿ ಗ್ರಾಪಂಗಳಿಗೆ ಸರ್ವೇ ನಂಬರ್ ಸಹಿತ ಅಚ್ಚುಕಟ್ಟು ಪ್ರದೇಶದ ನಕ್ಷೆ ಕಳುಹಿಸಲಾಗುವುು ಎಂದು ಅವರು ಮಾಹಿತಿ ನೀಡಿದರು.
ಯೋಜನೆಯ ಸಹಾಯಕ ಎಂಜಿನಿಯರ್ ಪ್ರಸನ್ನ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಹೆರಿಯಣ್ಣ ಕೋಣಿ, ಕೃಷ್ಣದೇವ ಕಾರಂತ, ಮಲ್ಯಾಡಿ ಶಿವರಾಮ ಶೆಟ್ಟಿ, ಜ್ಯೋತಿ ಪುತ್ರನ್, ಕೆದೂರು ಸದಾನಂದ ಶೆಟ್ಟಿ, ಅಶೋಕ್ ಪೂಜಾರಿ ಬೀಜಾಡಿ, ಶ್ರೀನಿವಾಸ ಶೆಟ್ಟಿ ಕೊರ್ಗಿ, ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾವತಿ, ಚಂದ್ರಶೇಖರ ಖಾರ್ವಿ, ಪುರಸಭೆ ಮುಖ್ಯಾಧಿ ಕಾರಿ ಗೋಪಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಿಕಾಸ್ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿ ವಂದಿಸಿದರು.







