ಭಾರತೀಯ ಆರೋಗ್ಯಸೇವೆ ಪೂರೈಕೆದಾರರ ಸಂಘದ ರಾಜ್ಯಾಧ್ಯಕ್ಷರಾಗಿ ಡಾ.ಸುಶಿಲ್ ಜತ್ತನ್ನ

ಮಂಗಳೂರು, ಜು.25: ಉಡುಪಿಯ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ಭಾರತೀಯ ಆರೋಗ್ಯ ಸೇವೆ ಪೂರೈಕೆದಾರರ ಸಂಘದ (ಎಎಚ್‌ಪಿಐ) ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಜನರಲ್ ಮೆಡಿಸಿನ್, ಪಬ್ಲಿಕ್ ಹೆಲ್ತ್ ಮೆಡಿಸಿನ್ ಮತ್ತು ಮ್ಯಾನೇಜ್‌ಮೆಂಟ್ ಎಂಬ ಮೂರು ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಅರ್ಹತೆಗಳನ್ನು ಪಡೆದಿರುವ ವೈದ್ಯ ಎಂಬ ಅಪರೂಪದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಪ್ರಸ್ತುತ ಅವರು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ (ಸಿಎಂಸಿ) ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರೋಟರಿ ಕ್ಲಬ್ ಆಫ್ ಮಂಗಳೂರಿನ ಸದಸ್ಯರಾಗಿದ್ದಾರೆ. ಈ ಹಿಂದೆ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿದ್ದರು. ಅದರ ಬ್ಲಡ್ ಬ್ಯಾಂಕ್ ಸಮಿತಿಯ ಅಧ್ಯಕ್ಷರೂ ಆಗಿದ್ದರು.
ಕರ್ನಾಟಕ ಅಂತರ ಡಯೋಸಿಸ್‌ನ ವೈದ್ಯಕೀಯ ಮಂಡಳಿಯ ಕಾರ್ಯದರ್ಶಿಯಾಗಿ ಕೂಡ ಅವರು ಸೇವೆ ಸಲ್ಲಿಸಿದ್ದಾರೆ ಮತ್ತು ಸಿಎಸ್‌ಐ ಸಿನೋಡ್‌ನ ವೈದ್ಯಕೀಯ ಮಂಡಳಿಯ ಸಂಯೋಜಕರಾಗಿದ್ದರು. ಸಾಮಾಜಿಕ ಸೇವೆಯ ಬದ್ಧತೆಗಾಗಿ ಅವರು ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಡಾ.ಸುಶಿಲ್ ಜತ್ತನ್ನ ಇಂಗ್ಲೆಂಡ್‌ನಲ್ಲಿ ವ್ಯಾಪಕ ವ್ಯಾವಹಾರಿಕ ಅನುಭವ ಪಡೆದಿದ್ದಾರೆ. ಅಲ್ಲಿಯ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಕೇಂಬ್ರಿಜ್‌ನ (ಯುಕೆ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಅವರು ಕೇರ್ ಯುಕೆ ಪಿಎಲ್‌ಸಿಯ ಆರೋಗ್ಯ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ವೈದ್ಯರು ಮತ್ತು ಆರೋಗ್ಯ ಸೇವೆ ಒದಗಿಸುವವರಿಗೆ ಪ್ರಕ್ಷುಬ್ಧ ಸಮಯದಲ್ಲಿ ಅವರು ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







