ಒಲಿಂಪಿಕ್ಸ್ ಟೇಬಲ್ ಟೆನಿಸ್ : ಮೂರನೇ ಸುತ್ತಿಗೆ ಶರತ್ ಕಮಲ್
ಕ್ವಾರ್ಟರ್ ಫೈನಲ್ಗೆ ಬಿಲ್ಗಾರಿಕೆ ತಂಡ

ಶರತ್ ಕಮಲ್-ಪ್ರವೀಣ್ ಜಾಧವ್
ಟೋಕಿಯೊ: ಅದ್ಭುತ ಪ್ರದರ್ಶನ ನೀಡಿದ ಭಾರತದ ಖ್ಯಾತ ಟೇಬಲ್ ಟೆನಿಸ್ ಪಟು ಶರತ್ ಕಮಲ್ ಒಲಿಂಪಿಕ್ಸ್ ಟೇಬಲ್ ಟೆನಿಸ್ ಸ್ಪರ್ಧೆಯ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಶರತ್, ಪೋರ್ಚ್ಗಲ್ನ ತಿಯಾಗೊ ಅಪೊಲೋನಿಯಾ ವಿರುದ್ಧ 4-2 ಸುಲಭ ಜಯ ಸಾಧಿಸಿದರು. ಮೊದಲ ಸೆಟ್ಟನ್ನು 2-11ರಿಂದ ಕಳೆದುಕೊಂಡ ಬಳಿಕ ಪ್ರತಿಹೋರಾಟ ಸಂಘಟಿಸಿದ ಕಮಲ್ ಮುಂದಿನ ಎರಡು ಸೆಟ್ಟನ್ನು 11-8 ಹಾಗೂ 11-5ರಿಂದ ಸುಲಭವಾಗಿ ಗೆದ್ದುಕೊಂಡರು. ನಾಲ್ಕನೇ ಸೆಟ್ನಲ್ಲಿ ಪೋರ್ಚುಗೀಸ್ ಆಟಗಾರ 9-11 ರಿಂದ ಗೆಲುವು ಸಾಧಿಸಿದರು. ಆದರೆ ಮತ್ತೆ ಅತ್ಯುತ್ತಮ ಪ್ರದರ್ಶನ ನೀಡಿದ ಶರತ್ 11-6, 11-9 ಅಂತರದ ಗೆಲುವ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು.
ಕ್ವಾರ್ಟರ್ ಫೈನಲ್ಗೆ ಬಿಲ್ಗಾರಿಕೆ ತಂಡ
ಪ್ರವೀಣ್ ಜಾಧವ್, ಅತನು ದಾಸ್ ಮತ್ತು ತರುಣ್ ದೀಪ್ ರಾಯ್ ಅವರನ್ನೊಳಗೊಂಡ ಭಾರತದ ಬಿಲ್ಗಾರಿಕೆ ತಂಡ ಟೋಕಿಯೊ ಒಲಿಂಪಿಕ್ಸ್ನಲ್ಲಿ 6-2 ಸೆಟ್ಗಳಿಂದ ಕಝಕಿಸ್ತಾನ ವಿರುದ್ಧ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ನಲ್ಲಿ ಭಾರತ ತಂಡ, ಪ್ರಬಲ ಕೊರಿಯಾದ ಸವಾಲು ಎದುರಿಸಲಿದೆ.
ಯುಮೆನಿಶೆಮೊ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ತೋರಿದರು. ಅದರಲ್ಲೂ ಮುಖ್ಯವಾಗಿ ಅತನು ದಾಸ್ ಐದು ಬಾರಿ 10 ಪರಿಪೂರ್ಣ ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡರು. ಡೆನಿಸ್ ಗಾಕಿನ್, ಲಿಫತ್ ಅಬ್ದುಲ್ಲೀನ್ ಮತ್ತು ಸಂಝಾರ್ ಮುಸ್ಸಯೇವ್ ಕೆಲ ಕ್ಷಣಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದರು. ಮೂರನೇ ಸೆಟ್ನಲ್ಲಿ ಒಂದು ಅಂಕದಿಂದ ಕಜಕ್ ತಂಡ ಗೆದ್ದಿತು. ಮಿಶ್ರ ಜೋಡಿ ವಿಭಾಗದಲ್ಲಿ ಭಾರತ, ಕೊರಿಯಾ ವಿರುದ್ಧ ಸೋಲು ಅನುಭವಿಸಿತ್ತು.