ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸಾರ್ವಜನಿಕ ಕ್ಷಮೆ ಯಾಚಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ

ಕೊಲ್ಕತ್ತಾ : ಬಿಜೆಪಿ ನಾಯಕರುಗಳಾದ ಸುವೇಂದು ಅಧಿಕಾರಿ ಮತ್ತು ದಿಲೀಪ್ ಘೋಷ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಭರಿತ ಪೋಸ್ಟ್ ಗಳನ್ನು ಮಾಡಿದ್ದ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಯುವಮೋರ್ಚಾ ಅಧ್ಯಕ್ಷ ಸೌಮಿತ್ರ ಖಾನ್ ಅವರು ತಮ್ಮ ಹೇಳಿಕೆಗಳಿಗೆ ರವಿವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರಲ್ಲದೆ ಆಡಳಿತ ತೃಣಮೂಲ ಕಾಂಗ್ರೆಸ್ ವಿರುದ್ಧ ಪ್ರಬಲ ಹೋರಾಟ ನಡೆಸುವ ಪ್ರತಿಜ್ಞೆಯನ್ನೂ ಗೈದಿದ್ದಾರೆ.
ಬಿಷ್ಣಾಪುರ ಕ್ಷೇತ್ರದ ಸಂಸದರಾಗಿರುವ ಖಾನ್ ಆವರು ಈ ಹಿಂದೆ ತಮ್ಮ ಯುವಮೋರ್ಚಾ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ ನಂತರ ಕೇಂದ್ರ ನಾಯಕತ್ವದ ಒತ್ತಾಯದ ಮೇರೆಗೆ ಅದನ್ನು ವಾಪಸ್ ಪಡೆದಿದ್ದರು.
ಕೆಲ ಸಮಯದ ಹಿಂದೆ ಫೇಸ್ ಬುಕ್‍ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ ಖಾನ್ ಅವರು ಸುವೇಂದು ಅಧಿಕಾರಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೀಗೆ ಬರೆದಿದ್ದರು. "ಒಬ್ಬ ನಿರ್ದಿಷ್ಟ ನಾಯಕ ದಿಲ್ಲಿಗೆ ಆಗಾಗ ಪ್ರಯಾಣಿಸುತ್ತಿದ್ದಾರೆ ಹಾಗೂ ಪಕ್ಷದ ಪ್ರತಿಯೊಂದು ಯಶಸ್ಸಿಗೂ ಶ್ರೇಯ ಪಡೆಯುತ್ತಿದ್ದಾರೆ. ವಿಪಕ್ಷದ ನಾಯಕ ಮೊದಲು ಕನ್ನಡಿಯಲ್ಲಿ ನೋಡಬೇಕು, ಅವರು ದಿಲ್ಲಿಯಲ್ಲಿರುವ ಉನ್ನತ ನಾಯಕರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಅವರು ತಮ್ಮನ್ನು ಬಂಗಾಳದ ಅತ್ಯಂತ ದೊಡ್ಡ ನಾಯಕನೆಂದು ತಿಳಿದುಕೊಂಡಿದ್ದಾರೆ" ಎಂದು ಖಾನ್ ಬರೆದಿದ್ದರು.
ನಂತರ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರನ್ನು ಗುರಿಯಾಗಿಸಿ, "ಏನು ನಡೆಯುತ್ತಿದೆ ಎಂಬುದರ ಅರ್ಧದಷ್ಟು ಮಾತ್ರ ಅವರಿಗೆ ಅರ್ಥವಾಗುತ್ತಿದೆ" ಎಂದಿದ್ದರು.
ರವಿವಾರ ಖಾನ್ ಅವರು ಬಿಜೆಪಿ ಯುವ ಘಟಕದ ಸಭೆಯಲ್ಲಿ ಮಾತನಾಡುತ್ತಾ "ಫೇಸ್ ಬುಕ್ ನಲ್ಲಿ ಹೇಳಿಕೆ ನೀಡಿದ್ದು ನನ್ನ ತಪ್ಪು. ಅದಕ್ಕೆ ಕ್ಷಮೆಯಾಚಿಸುತ್ತಿದ್ದೇನೆ. ಇಂತಹ ಹೇಳಿಕೆ ಮಾಡಬಾರದಾಗಿತ್ತು" ಎಂದು ಹೇಳಿದ್ದಾರೆ.
ನಂತರ ಅವರು ದಿಲೀಪ್ ಘೋಷ್ ಅವರ ಪಕ್ಕ ಕೂತು ನಗೆಚಟಾಕಿ ಹಾರಿಸುತ್ತಿದ್ದುದು ಕಂಡು ಬಂತು. "ಸೌಮಿತ್ರ ಖಾನ್ ಅವರೊಬ್ಬ ಭಾವುಕ ವ್ಯಕ್ತಿ. ಅವರ ಬಗ್ಗೆ ನನಗೆ ಯಾವುದೇ ಕೆಟ್ಟ ಅಭಿಪ್ರಾಯವಿಲ್ಲ. ಅವರು ಯುವಮೋರ್ಚಾ ನೇತೃತ್ವವನ್ನು ಮುಂದುವರಿಸುತ್ತಾರೆ," ಎಂದು ಘೋಷ್ ಹೇಳಿದರು.







