ಕೃಷಿ ಕಾಯ್ದೆ ವಿರೋಧಿಸಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸಂಸತ್ತಿಗೆ ತೆರಳಿದ ರಾಹುಲ್ ಗಾಂಧಿ

ಹೊಸದಿಲ್ಲಿ, ಜು. 26: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಸಂಸತ್ತಿಗೆ ತೆರಳಿದರು.
ಈ ವೇಳೆ ರಾಹುಲ್ ಗಾಂಧಿ, ಸಂಸದರಾದ ಪ್ರತಾಪ್ ಸಿಂಗ್ ಬಜ್ವಾ, ರವನೀತ್ ಸಿಂಗ್ ಬಿಟ್ಟು ಹಾಗೂ ದಿಪೀಂದರ್ ಸಿಂಗ್ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು. ಘೋಷಣೆಗಳನ್ನು ಕೂಗಿದರು.
ರಾಹುಲ್ ಗಾಂಧಿ ನೇತೃತ್ವದ ಟ್ರ್ಯಾಕ್ಟರ್ ರ್ಯಾಲಿಯನ್ನು ದಿಲ್ಲಿ ಪೊಲೀಸರು ತಡೆದರು ನಿಯಮ ಉಲ್ಲಂಘಿಸಿ ರ್ಯಾಲಿ ನಡೆಸಿದ ಆರೋಪದಲ್ಲಿ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಯುವ ಕಾಂಗ್ರೆಸ್ ವರಿಷ್ಠ ಶ್ರೀನಿವಾಸ್ ಬಿ.ವಿ. ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರನ್ನು ಸಂಸತ್ತಿನ ಹೊರಗೆ ವಶಕ್ಕೆ ತೆಗೆದುಕೊಂಡು ಮಂದಿರ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ದರು.
ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ‘‘ನಾನು ರೈತರ ಸಂದೇಶವನ್ನು ಸಂಸತ್ತಿಗೆ ತಂದಿದ್ದೇನೆ. ಕೇಂದ್ರ ಸರಕಾರ ರೈತರ ಧ್ವನಿಯನ್ನು ಹತ್ತಿಕ್ಕುತ್ತಿದೆ. ಅಲ್ಲದೆ, ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ಅವಕಾಶ ನೀಡುತ್ತಿಲ್ಲ. ಅದು ಈ ಕರಾಳ ಕಾಯ್ದೆಯನ್ನು ಹಿಂಪಡೆಯಬೇಕು. ಈ ಕಾಯ್ದೆ ಕೇವಲ ಇಬ್ಬರು ಮೂವರು ಉದ್ಯಮಿಗಳಿಗೆ ಮಾತ್ರ ಅನುಕೂಲಕರವಾಗಿದೆ ಎಂದು ದೇಶದ ಎಲ್ಲರಿಗೂ ತಿಳಿದಿದೆ’ ಎಂದರು.
‘‘ಕೃಷಿ ಕಾಯ್ದೆಯಿಂದ ನಮ್ಮ ರೈತರು ಸಂತೋಷಗೊಂಡಿದ್ದಾರೆ ಹಾಗೂ ಪ್ರತಿಭಟನೆ ನಡೆಸುತ್ತಿರುವವರು ಭಯೋತ್ಪಾದಕರು ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ, ವಾಸ್ತವವಾಗಿ ರೈತರ ಹಕ್ಕುಗಳನ್ನು ಕಸಿಯಲಾಗಿದೆ’ ಎಂದು ಅವರು ಹೇಳಿದರು.
ಚೀನಾವನ್ನು ಹೇಗೆ ನಿಭಾಯಿಸುವುದು ಎಂಬುದು ಕೇಂದ್ರ ಸರಕಾರಕ್ಕೆ ತೋಚುತ್ತಿಲ್ಲ. ಚೀನಾದ ಕ್ರಮಗಳನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಪೂರ್ವ ಲಡಾಖ್ನ ಡೆಮ್ಚೋಕ್ನಲ್ಲಿ ಭಾರತದ ಭಾಗದಲ್ಲಿ ಈಗಲೂ ಚೀನಾದ ಶಿಬಿರಗಳು ಇವೆ. ಉಭಯ ರಾಷ್ಟ್ರಗಳ ಮುಖ್ಯ ಕಮಾಂಡರ್ಗಳ ಮಾತುಕತೆಗೆ ಇದುವರೆಗೆ ದಿನ ನಿಗದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.