ಕೃನಾಲ್ ಪಾಂಡ್ಯಗೆ ಕೋವಿಡ್ ಪಾಸಿಟಿವ್ :ಭಾರತ- ಶ್ರೀಲಂಕಾ 2 ನೇ ಟಿ-20 ಪಂದ್ಯ ಮುಂದೂಡಿಕೆ
photo: IPLT20.COM
ಕೊಲಂಬೊ: ಭಾರತದ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರು ಕೊರೋನವೈರಸ್ ಸೋಂಕಿಗೆ ಒಳಗಾದ ನಂತರ ಮಂಗಳವಾರ ಕೊಲಂಬೊದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟಿ- 20 ಅಂತಾರಾಷ್ಟ್ರೀಯ ಪಂದ್ಯವನ್ನು ಮುಂದೂಡಲಾಗಿದೆ.
ಮಂಗಳವಾರ ಬೆಳಿಗ್ಗೆ ಪಂದ್ಯಕ್ಕೆ ಮುಂಚಿತವಾಗಿ ನಡೆಸಿದ ರ್ಯಾಪಿಡ್ ಆ್ಯಟಿಜೆನ್ ಟೆಸ್ಟ್ ನಂತರ, ಪಾಂಡ್ಯ ಅವರಿಗೆ ಕೋವಿಡ್ ಸೋಂಕು ಇರುವುದು ಕಂಡುಬಂದಿದೆ ಎಂದು ಬಿಸಿಸಿಐ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ. ಎಂಟು ಸದಸ್ಯರನ್ನು ನಿಕಟ ಸಂಪರ್ಕದಲ್ಲಿರುವುದನ್ನು ವೈದ್ಯಕೀಯ ತಂಡಗಳು ಗುರುತಿಸಿವೆ.
ತಂಡದಲ್ಲಿ ಇನ್ನೂ ಹೆಚ್ಚಿನ ಸೋಂಕು ಇರುವುದನ್ನು ಕಂಡುಹಿಡಿಯಲು ಇಡೀ ತಂಡವು ಇಂದು ಆರ್ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಟ್ಟಿದೆ.
ಎರಡನೇ ಪಂದ್ಯ ಬುಧವಾರ (ಜುಲೈ 28) ಹಾಗೂ ಮೂರನೇ ಪಂದ್ಯವು ಜುಲೈ 29ರಂದು ನಡೆಯಲಿದೆ.
ರವಿವಾರ ನಡೆದ ಆರಂಭಿಕ ಪಂದ್ಯದಲ್ಲಿ 38 ರನ್ಗಳ ಅಂತರದಿಂದ ಗೆಲುವು ಸಾಧಿಸಿರುವ ಭಾರತವು ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಕೃನಾಲ್ ಪಾಂಡ್ಯ ಮೊದಲ ಪಂದ್ಯದಲ್ಲಿ ಎರಡು ಓವರ್ಗಳಲ್ಲಿ 16 ಕ್ಕೆ 1 ವಿಕೆಟ್ ಪಡೆದಿದ್ದರು.