ತನ್ನ ಜನರ ವಿರುದ್ಧವೇ ಬಳಸಲು ಭಾರತ ಸರಕಾರ ಪೆಗಾಸಸ್ ಖರೀದಿಸಿದೆಯೇ?: ರಾಹುಲ್ ಗಾಂಧಿ ಪ್ರಶ್ನೆ

ಹೊಸದಿಲ್ಲಿ : ಭಾರತ ಸರಕಾರ ಪೆಗಾಸಸ್ ಖರೀದಿಸಿದೆಯೇ? ಹೌದು ಅಥವಾ ಇಲ್ಲ. ಸರಕಾರ ಪೆಗಾಸಸ್ ಸ್ಪೈವೇರ್ ಅನ್ನು ತನ್ನ ಜನರ ವಿರುದ್ಧವೇ ಬಳಸಿದೆಯೇ? ಈ ಕುರಿತು ಸದನದಲ್ಲಿ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ಸರಕಾರ ನಮಗೆ ಸ್ಪಷ್ಟವಾಗಿ ಹೇಳಿದೆ,'' ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಈ ವಿಚಾರವಾಗಿ ಕನಿಷ್ಠ 10 ಮಂದಿ ವಿಪಕ್ಷ ನಾಯಕರುಗಳ ಜತೆ ಚರ್ಚಿಸಿದ ನಂತರ ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದರು.
"ಪೆಗಾಸಸ್ ಬೇಹುಗಾರಿಕೆ ವಿಚಾರ ರಾಷ್ಟ್ರೀಯತೆ ಮತ್ತು ದೇಶದ್ರೋಹಕ್ಕೆ ಸಂಬಂಧಿಸಿರುವುದರಿಂದ ಇದರ ಬಗ್ಗೆ ವಿಪಕ್ಷಗಳಿಗೆ ಆತಂಕವಿದೆ,'' ಎಂದು ರಾಹುಲ್ ಹೇಳಿದರು.
"ನನಗೆ ಇದು ಖಾಸಗಿತನದ ವಿಚಾರ. ಇದೊಂದು ದೇಶವಿರೋಧಿ ಕೃತ್ಯ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಭಾರತದ ಪ್ರಜಾಪ್ರಭುತ್ವದ ಆತ್ಮದ ಮೇಲೆ ದಾಳಿ ನಡೆಸಿದ್ದಾರೆ. ಈ ಆಯುಧವನ್ನು ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳ ವಿರುದ್ಧ ಏಕೆ ಬಳಸಿದಿರಿ ಎಂದು ಮೋದಿ ಮತ್ತು ಶಾ ಅವರಲ್ಲಿ ಕೇಳಬಯಸುತ್ತೇವೆ,'' ಎಂದು ಅವರು ಹೇಳಿದರು.
ರಾಷ್ಟ್ರ ಭದ್ರತೆ ಮತ್ತು ಕೃಷಿ ಕಾಯಿದೆಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಲಿವೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದರು.
ಬುಧವಾರದ ಸಭೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎನ್‍ಸಿಪಿ, ನ್ಯಾಷನಲ್ ಕಾನ್ಫರೆನ್ಸ್, ಮುಸ್ಲಿಂ ಲೀಗ್, ರಿವೊಲ್ಯೂಷನರಿ ಸೋಶಿಯಲಿಸ್ಟ್ ಪಾರ್ಟಿ, ಕೇರಳ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ತಮಿಳುನಾಡಿನ ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದ ನಾಯಕರು ಭಾಗವಹಿಸಿದ್ದರು.







