ಎಲ್ಡಿಎಫ್ ಶಾಸಕರ ವಿರುದ್ಧ ಪ್ರಕರಣದ ಹಿಂದೆಗೆತ ಕೋರಿದ್ದ ಕೇರಳ ಸರಕಾರದ ಮೇಲ್ಮನವಿಗೆ ಸುಪ್ರೀಂ ಕೋರ್ಟ್ ತಿರಸ್ಕಾರ
ವಿಧಾನಸಭೆಯಲ್ಲಿ ಗದ್ದಲ ಪ್ರಕರಣ

ಹೊಸದಿಲ್ಲಿ,ಜು.28: ರಾಜ್ಯ ವಿಧಾನಸಭೆಯಲ್ಲಿ 2015ರಲ್ಲಿ ನಡೆದಿದ್ದ ಗದ್ದಲಕ್ಕೆ ಸಂಬಂಧಿಸಿದಂತೆ ಎಲ್ಡಿಎಫ್ ಶಾಸಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹಿಂದೆಗೆದುಕೊಳ್ಳಲು ಕೋರಿದ್ದ ತನ್ನ ಅರ್ಜಿಯನ್ನು ವಜಾಗೊಳಿಸಿದ್ದ ಉಚ್ಚ ನ್ಯಾಯಾಲಯದ ಮಾ.12ರ ಆದೇಶದ ವಿರುದ್ಧ ಕೇರಳ ಸರಕಾರವು ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ತಿರಸ್ಕರಿಸಿತು.
ಶಾಸಕರ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು ಮತ್ತು ಅವರ ವಿಶೇಷ ಹಕ್ಕುಗಳು ಅವರಿಗೆ ಕ್ರಿಮಿನಲ್ ಕಾನೂನಿನ ವಿರುದ್ಧ ರಕ್ಷಣೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎಂ.ಆರ್.ಶಾ ಅವರ ಪೀಠವು,ಸಾರ್ವಜನಿಕ ಆಸ್ತಿಯನ್ನು ನಾಶಗೊಳಿಸುವುದನ್ನು ಸದನದ ಸದಸ್ಯರಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವೆಂದು ಸಮೀಕರಿಸಲು ಸಾಧ್ಯವಿಲ್ಲ ಎಂದು ಹೇಳಿತು.
2015,ಮಾ.13ರಂದು ಕೇರಳ ವಿಧಾನಸಭೆಯು ಹಿಂದೆಂದೂ ಕಂಡಿರದ ಘಟನೆಗಳಿಗೆ ಸಾಕ್ಷಿಯಾಗಿತ್ತು. ಆಗ ಪ್ರತಿಪಕ್ಷದಲ್ಲಿದ್ದ ಎಲ್ಡಿಎಫ್ ಸದಸ್ಯರು ಬಾರ್ಗಳಿಂದ ಲಂಚ ಸ್ವೀಕಾರದ ಆರೋಪವನ್ನು ಎದುರಿಸುತ್ತಿದ್ದ ಆಗಿನ ಹಣಕಾಸು ಸಚಿವ ಕೆ.ಎಂ.ಮಣಿ ಅವರು ರಾಜ್ಯ ಮುಂಗಡಪತ್ರವನ್ನು ಮಂಡಿಸುವುದನ್ನು ತಡೆಯಲು ಯತ್ನಿಸಿದ್ದು,ಈ ಸಂದರ್ಭದಲ್ಲಿ ವೇದಿಕೆಯಲ್ಲಿನ ಸ್ಪೀಕರ್ ಖುರ್ಚಿಯನ್ನು ಎತ್ತಿ ಎಸೆದಿದ್ದರಲ್ಲದೆ ಪೀಠದಲ್ಲಿದ್ದ ಕಂಪ್ಯೂಟರ್,ಕೀಬೋರ್ಡ್ ಮತ್ತು ಮೈಕ್ ಗಳಂತಹ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯನ್ನೂ ಉಂಟು ಮಾಡಿದ್ದರು.
ಪ್ರಕರಣದಲ್ಲಿ ಆರೋಪಿಸಲಾಗಿರುವ ಘಟನೆಯು ಸದನವು ಅಧಿವೇಶನದಲ್ಲಿದ್ದಾಗ ನಡೆದಿತ್ತು ಮತ್ತು ಸ್ಪೀಕರ್ ಪೂರ್ವಾನುಮತಿಯಿಲ್ಲದೆ ಕಿಮಿನಲ್ ಪ್ರಕರಣವನ್ನು ದಾಖಲಿಸುವಂತಿಲ್ಲ ಎನ್ನುವ ಅಂಶವನ್ನು ಮನಗಾಣಲು ಉಚ್ಚ ನ್ಯಾಯಾಲಯವು ವಿಫಲಗೊಂಡಿದೆ ಎಂದು ಕೇರಳ ಸರಕಾರವು ತನ್ನ ಮೇಲ್ಮನವಿಯಲ್ಲಿ ಪ್ರತಿಪಾದಿಸಿತ್ತು.







