ಅಗ್ಗದ ದರಗಳ ವಿಮಾನಯಾನ ಸಂಸ್ಥೆಯ ಆರಂಭಕ್ಕೆ ಝುಂಝುನವಾಲಾ ಸಜ್ಜು

photo : twitter
ಹೊಸದಿಲ್ಲಿ,ಜು.28: ಖ್ಯಾತ ಹೂಡಿಕೆದಾರ ರಾಕೇಶ್ ಝುಂಝುನವಾಲಾ ಅವರು ಅಗ್ಗದ ದರಗಳ ನೂತನ ವಿಮಾನಯಾನ ಸಂಸ್ಥೆಯನ್ನು ಆರಂಭಿಸಲು ಸಜ್ಜಾಗಿದ್ದಾರೆ. ಭವಿಷ್ಯದಲ್ಲಿ ಹೆಚ್ಚೆಚ್ಚು ಜನರು ವಿಮಾನಗಳಲ್ಲಿ ಪ್ರಯಾಣಿಸಲಿದ್ದಾರೆ ಎಂಬ ಭರವಸೆಯೊಂದಿಗೆ ಮುಂದಿನ ನಾಲ್ಕು ವರ್ಷಗಳಲ್ಲಿ 70 ವಿಮಾನಗಳೊಂದಿಗೆ ವಿಮಾನಯಾನ ಸಂಸ್ಥೆಯನ್ನು ಆರಂಭಿಸಲು ಝುಂಝುನವಾಲಾ ಯೋಜಿಸಿದ್ದಾರೆ ಎಂದು ಬ್ಲೂಮ್ಬರ್ಗ್ ಡಾಟ್ ಕಾಮ್ ವರದಿ ಮಾಡಿದೆ.
ನೂತನ ಉದ್ಯಮದಲ್ಲಿ 350 ಮಿ.ಡಾ.(261 ಕೋ.ರೂ.)ಗಳ ಹೂಡಿಕೆ ಮಾಡಲು ತಾನು ಉದ್ದೇಶಿಸಿದ್ದು, ಶೇ.40ರಷ್ಟು ಪಾಲು ಬಂಡವಾಳವನ್ನು ಹೊಂದಿರಲಿದ್ದೇನೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿರುವ ಝುಂಝುನವಾಲಾ,ಮುಂದಿನ 15 ದಿನಗಳಲ್ಲಿ ನಾಗರಿಕ ವಾಯುಯಾನ ಸಚಿವಾಲಯದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ನೂತನ ವಿಮಾನಯಾನ ಸಂಸ್ಥೆಯು ಆಕಾಶ ಏರ್ಲೈನ್ಸ್ ಹೆಸರನ್ನು ಹೊಂದಿರಲಿದ್ದು ಡೆಲ್ಟಾ ಏರ್ ಲೈನ್ಸ್ ನ ಮಾಜಿ ಹಿರಿಯ ಅಧಿಕಾರಿಯನ್ನು ಒಳಗೊಂಡ ತಂಡವು ಕನಿಷ್ಠ 180 ಪ್ರಯಾಣಿಕರನ್ನು ಸಾಗಿಸಬಲ್ಲ ವಿಮಾನಗಳಿಗಾಗಿ ಅನ್ವೇಷಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.





