ಜನನ, ಮರಣ ಪ್ರಮಾಣಪತ್ರ ಉಚಿತ ಪಡೆಯಿರಿ: ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು, ಜು.29: ದ.ಕ. ಜಿಲ್ಲೆಯ ನಾಗರಿಕರು ತಮ್ಮ ಕುಟುಂಬದಲ್ಲಿ ಸಂಭವಿಸುವ ಜನನ ಅಥವಾ ಮರಣಗಳನ್ನು ಸ್ಥಳೀಯ ನೋಂದಣಿ ಕಚೇರಿಯಲ್ಲಿ 21 ದಿನದೊಳಗೆ ನೋಂದಾಯಿಸಿಕೊಳ್ಳಬೇಕು. ಸಂಬಂಧಿಸಿದ ಪ್ರಮಾಣ ಪತ್ರವನ್ನು ಉಚಿತವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜನನ-ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
21 ದಿನದ ನಂತರ ನೋಂದಣಿ ಮಾಡಿಕೊಂಡಲ್ಲಿ ಶುಲ್ಕ ಭರಿಸಬೇಕಾಗುತ್ತದೆ. ಜನನ-ಮರಣ ನೋಂದಣಿ ಕಡ್ಡಾಯವಾಗಿದೆ. ಜನನ, ಮರಣ ನೋಂದಣಿ ಮಾಡಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದು, ಗಣಕೀಕೃತ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಗ್ರಾಮ ಲೆಕ್ಕಗರು, ಸರಕಾರಿ ವೈದ್ಯಾಧಿಕಾರಿಗಳು, ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರು ಮನೆಯಲ್ಲಿ ಸಂಭವಿಸುವ ಜನನ ಘಟನೆಗಳ ವರದಿ ಪಡೆದು 21 ದಿನದೊಳಗೆ ಸಂಬಂಧಿಸಿದವರಿಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿ, ಪ್ರಮಾಣ ಪತ್ರಗಳನ್ನು ವಿತರಿಸುವಂತೆ ಸೂಚಿಸಿದರು.
ಪ್ರತಿಯೊಂದು ಜನನ-ಮರಣ ಮತ್ತು ನಿರ್ಜೀವ ಜನನ ಘಟನೆಗಳು ನೋಂದಣಿಯಾಗಬೇಕು. ನೋಂದಣಿಯು ಶೇ.100ರಷ್ಟು ತಲುಪಬೇಕೆಂಬ ಉದ್ದೇಶದಿಂದ ಆನ್‌ಲೈನ್ ನೋಂದಣಿ ಮಾಡಲಾಗುತ್ತಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜನನ ಮತ್ತು ಮರಣ ನೋಂದಣಿ ನಿಯಮಗಳಂತೆ ಜಿಲ್ಲೆಯ ಎಲ್ಲ ನೋಂದಣಿ ಘಟಕಗಳು ನಿಯಮಾನುಸಾರ ನೋಂದಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇ.100ರಷ್ಟು ಘಟನೆಗಳು ದಾಖಲಾಗಿರುವ ಬಗ್ಗೆ ಕಂದಾಯ, ನಗರಾಭಿವೃದ್ಧಿ ಮತ್ತು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದವರು ನಿರ್ದೇಶನ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ, ಜಿಲ್ಲಾ ಸಂಖ್ಯಾ ಸಂಗ್ರಹಾಣಾಧಿಕಾರಿ ವಿನಾಯಕ.ಎನ್. ಮಹಾಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.







