ಮಲೇಶ್ಯಾ ಪ್ರಧಾನಿ ಪದತ್ಯಾಗಕ್ಕೆ ಹೆಚ್ಚಿದ ಒತ್ತಡ

photo: twitter/@MuhyiddinYassin
ಕೌಲಾಲಾಂಪುರ, ಜು.29: ತುರ್ತು ಸುಗ್ರೀವಾಜ್ಞೆಗಳ ನಿರ್ವಹಣೆಯ ವಿಷಯದಲ್ಲಿ ಸರಕಾರದ ವಿರುದ್ಧ ಅಲ್ಲಿನ ದೊರೆ ತೀವ್ರ ಆಕ್ಷೇಪ ಸೂಚಿಸಿದ ಬಳಿಕ ಪ್ರಧಾನಿ ಮುಹಿಯುದ್ದೀನ್ ಯಾಸಿನ್ ರಾಜೀನಾಮೆಗೆ ವಿಪಕ್ಷಗಳು ಹಾಗೂ ಆಡಳಿತಾರೂಢ ಮೈತ್ರಿಕೂಟದ ಪಕ್ಷ ಆಗ್ರಹಿಸಿವೆ ಎಂದು ವರದಿಯಾಗಿದೆ. ಜನವರಿಯಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಿದ್ದ ಸಂದರ್ಭ ಹೊರಡಿಸಿದ್ದ ಸುಗ್ರೀವಾಜ್ಞೆಗಳನ್ನು ಜುಲೈ 21ರಿಂದ ರದ್ದುಗೊಳಿಸಲಾಗಿದೆ ಎಂದು ಯಾಸಿನ್ ಅವರ ಸರಕಾರ ಇತ್ತೀಚೆಗೆ ಹೇಳಿತ್ತು. ಕೊರೋನ ಸೋಂಕು ನಿರ್ಬಂಧಿಸಲು ತುರ್ತು ಪರಿಸ್ಥಿತಿಯ ಅಗತ್ಯವಿದೆ ಎಂದು ಸರಕಾರ ಶಿಫಾರಸು ಮಾಡಿದ್ದರಿಂದ ದೊರೆ ಅಲ್ಸುಲ್ತಾನ್ ಅಬ್ದುಲ್ಲಾ ತುರ್ತುಪರಿಸ್ಥಿತಿ ಜಾರಿಗೊಳಿಸಿದ್ದರು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಲ್ಪಬಹುಮತದ ಸರಕಾರವಿರುವ ಲಾಭ ಪಡೆದ ದೊರೆ ಅಧಿಕಾರವನ್ನು ಕೈವಶ ಮಾಡಿಕೊಳ್ಳಲು ಬಯಸಿದ್ದಾರೆ ಎಂದು ಟೀಕಿಸಲಾಗಿತ್ತು.
ಆದರೆ ಸುಗ್ರೀವಾಜ್ಞೆ ಜಾರಿಗೆ ಶಿಫಾರಸು ಮಾಡಿದ್ದ ಸರಕಾರ, ಅದನ್ನು ರದ್ದುಗೊಳಿಸುವ ವಿಷಯದಲ್ಲಿ ದೊರೆಯ ಒಪ್ಪಿಗೆ ಪಡೆದಿಲ್ಲ. ಈ ಮೂಲಕ ದೇಶದ ಸಂವಿಧಾನವನ್ನು ಉಲ್ಲಂಸಿದೆ ಎಂದು ರಾಜಭವನದ ಹೇಳಿಕೆ ತಿಳಿಸಿದೆ. ದೇಶದ ಮುಖ್ಯಸ್ಥನ ನೆಲೆಯಲ್ಲಿ, ಯಾವುದೇ ಪಕ್ಷ ಫೆಡರಲ್ ಸಂವಿಧಾನದ ಚೌಕಟ್ಟನ್ನು ಮೀರದಂತೆ (ವಿಶೇಷವಾಗಿ ದೊರೆಯ ಅಧಿಕಾರ ಮತ್ತು ಕಾರ್ಯನಿರ್ವಹಣೆಯ ವಿಷಯದಲ್ಲಿ) ನೋಡಿಕೊಳ್ಳುವುದು ದೊರೆಯ ಜವಾಬ್ದಾರಿಯಾಗಿದೆ ಎಂದು ರಾಜಭವನದ ಹೇಳಿಕೆ ತಿಳಿಸಿದೆ.
ಸಾಂವಿಧಾನಿಕ ರಾಜಪ್ರಭುತ್ವವಿರುವ ಮಲೇಶ್ಯಾದಲ್ಲಿ ದೊರೆಯು ಪ್ರಧಾನಿ ಹಾಗೂ ಸಚಿವ ಸಂಪುಟಕ್ಕೆ ಸಲಹೆ ನೀಡುವ ಪಾತ್ರ ನಿರ್ವಹಿಸುತ್ತಾರೆ. ಆದರೆ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸುವ ಬಗ್ಗೆ ಅಂತಿಮ ನಿರ್ಧಾರ ದೊರೆಯದ್ದಾಗಿರುತ್ತದೆ. ದೊರೆಯ ಆದೇಶ ಪಾಲಿಸದ ಪ್ರಧಾನಿ ರಾಜೀನಾಮೆ ನೀಡಬೇಕೆಂದು ಆಡಳಿತಾರೂಢ ಮೈತ್ರಿಕೂಟದಲ್ಲಿ ಪ್ರಮುಖ ಪಕ್ಷವಾಗಿರುವ ಯುಎಮ್ಎನ್ಒ ಪಕ್ಷ ಆಗ್ರಹಿಸಿದೆ. ಪ್ರಧಾನಿಯ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ವಿಪಕ್ಷ ನಾಯಕ ಅನ್ವರ್ ಇಬ್ರಾಹಿಂ ಹೇಳಿದ್ದಾರೆ.







