ಹಾಸನದಲ್ಲಿ ಮಂಗಗಳ ಮಾರಣಹೋಮ: ವರದಿ ಸಲ್ಲಿಸಲು ಡಿಸಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು, ಜು.30: ಹಾಸನದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದ ಮಂಗಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.4ರೊಳಗೆ ವರದಿ ಸಲ್ಲಿಸಲು ಹೈಕೋರ್ಟ್ ಹಾಸನ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.
ಪ್ರಕರಣದ ವಿಚಾರಣೆಗೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವ ಹೈಕೋರ್ಟ್, ಈ ಸೂಚನೆ ನೀಡಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೌಡನಹಳ್ಳಿಯಲ್ಲಿ ಮಂಗಗಳ ಮಾರಣಹೋಮ ನಡೆದಿತ್ತು. ಇಂತಹ ಅಮಾನವೀಯ ಕೃತ್ಯಕ್ಕೆ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಎಸ್‍ಪಿ, ಆರ್ ಎಫ್‍ಒ ಅವರನ್ನು ಪ್ರತಿವಾದಿಯಾಗಿಸಲು ಸೂಚನೆ ನೀಡಲಾಗಿದೆ. ಕಾಡಿನ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಮಂಗಗಳನ್ನು ಬರ್ಬರವಾಗಿ ಹತ್ಯೆಗೈದಿರುವುದು ಆಘಾತಕಾರಿ. ಇಲ್ಲಿ ಪ್ರಾಣಿಗಳ ದೌರ್ಜನ್ಯ ತಡೆ ಕಾಯ್ದೆ ಸ್ಪಷ್ಟ ಉಲ್ಲಂಘನೆ ಆಗಿದೆ. ಮಂಗಗಳ ಹಾವಳಿಯನ್ನೂ ಘನತೆಯಿಂದ ನಿಯಂತ್ರಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಅಷ್ಟೇ ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಕನಿಷ್ಠ ವಿವೇಚನೆಯನ್ನೂ ಮರೆತು ಮೂಕ ಜೀವಿಗಳನ್ನು ಜನರು ಕೊಂದಿದ್ದರು, ಕ್ರೂರವಾಗಿ ವರ್ತಿಸಿದ್ದರು. 30ಕ್ಕೂ ಹೆಚ್ಚು ಮಂಗಗಳನ್ನು ಕೊಂದು ಚೀಲದಲ್ಲಿ ತುಂಬಿ ರಸ್ತೆಯಲ್ಲಿ ಬಿಸಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೌಡನಹಳ್ಳಿ ಬಳಿ ನಡೆದಿತ್ತು. ಸ್ಥಳೀಯರು ರಾತ್ರಿ 10 ಗಂಟೆ ಸಮಯದಲ್ಲಿ ಓಡಾಡುತ್ತಿರುವಾಗ ರಸ್ತೆಯ ಪಕ್ಕದಲ್ಲಿ ದೊಡ್ಡದಾದ ಚೀಲವೊಂದು ಬಿದ್ದಿರುವುದು ಗಮನಕ್ಕೆ ಬಂದಿತ್ತು. ಪ್ರಾಣಿಗಳ ಕಿರುಚಾಟವೂ ಕೇಳತೊಡಗಿತ್ತು.
ತಡಮಾಡದೆ ಚೀಲದ ಗಂಟು ಬಿಚ್ಚಿ ನೋಡುವಷ್ಟರಲ್ಲಿ 30ಕ್ಕೂ ಹೆಚ್ಚು ಮಂಗಗಳು ಬಲಿಯಾಗಿದ್ದವು. ಇನ್ನು ಕೆಲವು ಗಂಭೀರ ಸ್ಥಿತಿಯಲ್ಲಿದ್ದು ಕಿರುಚಾಡುತ್ತಿದ್ದವು. 15ಕ್ಕೂ ಹೆಚ್ಚು ಕೋತಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವು. 30 ಮಂಗಗಳ ಹತ್ಯೆ ಮಾಡಲಾಗಿತ್ತು. ರಾತ್ರೋರಾತ್ರಿ ಕಾರಿನಲ್ಲಿ ತುಂಬಿಕೊಂಡು ರಸ್ತೆಯಲ್ಲಿ ಬಿಸಾಡಿ ಹೋಗಿರುವ ಮಾಹಿತಿ ತಿಳಿದು ಬಂದಿತ್ತು.







