‘ಕಿಸಾನ್ ಆಂದೋಲನ’ದ ಸಂದರ್ಭ ರೈತರ ಸಾವು: ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಆಗ್ರಹ
ಹೊಸದಿಲ್ಲಿ, ಜು. 30: ಮೂರು ಕೃಷಿ ಕಾಯ್ದೆಗಳ ವಿರುದ್ಧದ ‘ಕಿಸಾನ್ ಆಂದೋಲನ’ದ ಸಂದರ್ಭ ಮೃತಪಟ್ಟ ರೈತರ ವಿವರಗಳನ್ನು ದೃಢಪಡಿಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸುವಂತೆ ಆಗ್ರಹಿಸಿ ಎಡಪಕ್ಷಗಳು ಸೇರಿದಂತೆ ಶಿರೋಮಣಿ ಅಕಾಲಿ ದಳ, ಎನ್ಸಿಪಿ, ಶಿವಸೇನೆ ಹಾಗೂ ಇತರ ಕೆಲವು ಪ್ರತಿಪಕ್ಷಗಳು ಲೋಕಸಭಾ ಸ್ಪೀಕರ್ ಓಮ್ ಬಿರ್ಲಾ ಅವರಿಗೆ ಪತ್ರ ಬರೆದಿವೆ.
ಸ್ವೀಕರ್ ಅವರಿಗೆ ಬರೆದ ಪತ್ರದಲ್ಲಿ ಈ ಪ್ರಕರಣದ ಮಧ್ಯೆ ಪ್ರವೇಶಿಸುವಂತೆ ಎಸ್ಎಡಿ, ಶಿವಸೇನೆ, ಎನ್ಸಿಪಿ, ಬಿಎಸ್ಪಿ, ಜೆಕೆಎನ್ಸಿ, ಆರ್ಎಲ್ಪಿ, ಸಿಪಿಐ ಹಾಗೂ ಸಿಪಿಐ-ಎಂ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ. ರೈತರ ಸಾವಿನ ಬಗ್ಗೆ ಕೇಂದ್ರದಲ್ಲಿ ಮಾಹಿತಿ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ನಾಯಕರು ಈ ಪತ್ರ ಬರೆದಿದ್ದಾರೆ. ಸಚಿವರ ಹೇಳಿಕೆ ದೇಶಾದ್ಯಂತದ ರೈತ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ರೈತರಿಗೆ ಅವಮಾನ ಮಾಡಿದ ಅವರು ಕ್ಷಮೆ ಕೋರಬೇಕು ಎಂದು ಪ್ರತಿಪಕ್ಷದ ನಾಯಕರು ಹೇಳಿದ್ದಾರೆ.
ಎಸ್ಎಡಿ ಹಾಗೂ ಇತರ ಪಕ್ಷಗಳ ನಾಯಕರು ಈ ಸಂಬಂಧ ರಾಷ್ಟ್ರ ಪತಿ ಅವರನ್ನು ಶನಿವಾರ ಬೆಳಗ್ಗೆ ಭೇಟಿಯಾಗಲಿದ್ದಾರೆ. ‘‘ಕಿಸಾನ್ ಆಂದೋಲನದ ಸಂದರ್ಭ ನೂರಾರು ರೈತರು ಸಾವನ್ನಪ್ಪಿರುವ ಬಗ್ಗೆ ಸ್ಪಷ್ಟವಾದ ಪುರಾವೆಗಳು ಇರುವ ಹೊರತಾಗಿಯೂ ಕೇಂದ್ರ ಕೃಷಿ ಸಚಿವರು ರೈತರು ಸಾವನ್ನಪ್ಪಿಲ್ಲ ಹೇಳುವ ಮೂಲಕ ಅನ್ನದಾತರಿಗೆ ಅವಮಾನ ಮಾಡಿರುವುದು ಆಘಾತಕಾರಿ ವಿಚಾರ’’ ಎಂದು ನಾಯಕರು ಹೇಳಿದ್ದಾರೆ. ‘‘ಅವರು ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ. ಅಂಕೆಯಿಲ್ಲದ ಹೇಳಿಕೆ ನೀಡುವ ಮೂಲಕ ರೈತರ ಗೌರವಕ್ಕೆ ಧಕ್ಕೆ ಉಂಟು ಮಾಡಿದ ಸಚಿವರು ಕ್ಷಮೆ ಕೋರಬೇಕು ಎಂದು ನಾವು ಆಗ್ರಹಿಸುತ್ತೇವೆ’’ ಎಂದು ನಾಯಕರು ಹೇಳಿದ್ದಾರೆ. ಜಂಟಿ ಸಂಸದೀಯ ಸಮಿತಿ ರೈತರಿಂದ, ಅವರ ಪ್ರತಿನಿಧಿಗಳಿಂದ ನೇರವಾಗಿ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಹಾಗೂ ಅದನ್ನು ಅಗತ್ಯದ ಕ್ರಮಗಳಿಗೆ ಸರಕಾರಕ್ಕೆ ಕಳುಹಿಸಿ ಕೊಡಬೇಕು ಎಂದು ಪತ್ರದಲ್ಲಿ ನಾಯಕರು ಆಗ್ರಹಿಸಿದ್ದಾರೆ.







