ಸಾರಿಗೆ ನೌಕರರ ವಿರುದ್ಧದ ಎಲ್ಲ `ಶಿಸ್ತು ಕ್ರಮ'ಗಳನ್ನು ರದ್ದು ಮಾಡಿ: ನೂತನ ಸಿಎಂಗೆ ಅನಂತ ಸುಬ್ಬರಾವ್ ಮನವಿ
ಬೆಂಗಳೂರು, ಜು. 30: `ಕೋವಿಡ್‍ನಿಂದ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಪರಿಸ್ಥಿತಿ ಸುಧಾರಿಸುವವರೆಗೂ ರಾಜ್ಯ ಸರಕಾರ ಧನಸಹಾಯ ನೀಡುವುದನ್ನು ಮುಂದುವರಿಸಬೇಕು. 2020ರ ಜನವರಿ 1ರಂದು ಆಗಿರುವ ವೇತನ ಒಪ್ಪಂದವನ್ನು ಶೀಘ್ರ ಗತಿಯಲ್ಲಿ ಜಾರಿಗೆ ತರಬೇಕು' ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ.ಅನಂತ ಸುಬ್ಬರಾವ್, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಸಿಎಂಗೆ ಪತ್ರ ಬರೆದಿರುವ ಅನಂತ ಸುಬ್ಬರಾವ್ ಅವರು, `ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಒಟ್ಟು 1.2 ಲಕ್ಷ ನೌಕಕರಿದ್ದು, ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯದ ರೈತರು, ಕಾರ್ಮಿಕರು ಸೇರಿದಂತೆ ಇತರೆ ಜನವರ್ಗದವರಂತೆ ಇಲ್ಲಿನ ನೌಕರರು ಸಮಸ್ಯೆಗೆ ಸಿಲುಕಿದ್ದಾರೆ. ಸರಕಾರದ ನೀತಿಗಳು, ನಿಗಮಗಳಲ್ಲಿರುವ ವ್ಯಾಪಕ ಭ್ರಷ್ಟಾಚಾರ ಮತ್ತು ನಿಗಮಗಳ ಕಾರ್ಮಿಕ ವಿರೋಧಿ ನೀತಿಗಳಿಂದ ನಿಗಮಗಳು ಆರ್ಥಿಕ ಬಿಕ್ಕಟ್ಟಿನಲ್ಲಿವೆ. ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿ ವರ್ಗ, ನೌಕರರನ್ನು ಶತ್ರುಗಳಂತೆ ಕಾಣುತ್ತಿದ್ದಾರೆ' ಎಂದು ದೂರಿದ್ದಾರೆ.
`ಸಿಎಂ ಆಗಿ ತಾವು ಅಧಿಕಾರ ವಹಿಸಿಕೊಂಡ ನಂತರ ಮಿತವ್ಯಯ ಮಾಡುವ ಕರೆ ನೀಡಿದ್ದೀರಿ. ಇದು ಸಮಯೋಚಿತ. ನಿಮ್ಮ ಕರೆಯನ್ನು ಮೊದಲು ಸಾರಿಗೆ ನಿಗಮಗಳ ಬಗ್ಗೆ ಸರಕಾರ ಜಾರಿಗೆ ತರುವುದು ಸೂಕ್ತ. ಆ ನಿಟ್ಟಿನಲ್ಲಿ ನಾಲ್ಕೂ ನಿಗಮಗಳನ್ನು ಒಂದು ಮಾಡಬೇಕು. 2005ರ ಐತೀರ್ಪನ್ನು ಜಾರಿ ಮಾಡಬೇಕು. 2020ರ ಡಿಸೆಂಬರ್ ಮತ್ತು 2021ರ ಎಪ್ರಿಲ್ ಮುಷ್ಕರ ಸಂದರ್ಭದಲ್ಲಿ ನೌಕರರ ವಿರುದ್ಧ ತೆಗೆದುಕೊಂಡಿರುವ ವರ್ಗಾವಣೆಗಳನ್ನು ಮತ್ತು ಎಲ್ಲ ಶಿಸ್ತಿನ ಕ್ರಮಗಳನ್ನು ರದ್ದು ಮಾಡಬೇಕು' ಎಂದು ಅನಂತ ಸುಬ್ಬರಾವ್ ಮನವಿ ಮಾಡಿದ್ದಾರೆ.







