ಶೌಚಗುಂಡಿಗಳ ಸ್ವಚ್ಛತೆ ವೇಳೆ ಯಾವುದೇ ಸಾವು ಸಂಭವಿಸಿಲ್ಲ: ಕೇಂದ್ರದ ಹೇಳಿಕೆಗೆ ಸಾಮಾಜಿಕ ಕಾರ್ಯಕರ್ತರ ಆಕ್ರೋಶ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜು.30: ದೇಶದಲ್ಲಿ ದೈಹಿಕವಾಗಿ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವಾಗ ಯಾವುದೇ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ರಾಜ್ಯಸಭೆಯಲ್ಲಿ ನೀಡಿರುವ ಹೇಳಿಕೆಗೆ ಸಾಮಾಜಿಕ ಹೋರಾಟಗಾರರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಉದ್ಯೋಗದಲ್ಲಿ ತೊಡಗಿಕೊಂಡಿರುವ ಜನರಿಗೆ ಅವರ ಸಾವುಗಳಲ್ಲಿಯೂ ಘನತೆಯನ್ನು ನಿರಾಕರಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ ಹೊರುವ ವೃತ್ತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ,2013ರಡಿ ಶೌಚಗುಂಡಿಗಳ ಸ್ವಚ್ಛತೆಗೆ ಮನುಷ್ಯರನ್ನು ಬಳಸುವುದನ್ನು ನಿಷೇಧಿಸಲಾಗಿದೆ.
ಸದನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಸಹಾಯಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ ಅಠಾವಳೆ ಅವರು ,ದೇಶದಲ್ಲಿ ಶೌಚಗುಂಡಿ ಸ್ವಚ್ಛತೆ ವೃತ್ತಿಯಲ್ಲಿ ತೊಡಗಿಕೊಂಡಿರುವ 66,692 ಜನರನ್ನು ಗುರುತಿಸಲಾಗಿದೆ ಮತ್ತು ಈ ವೃತ್ತಿಯಿಂದಾಗಿ ಯಾವುದೇ ಸಾವುಗಳು ವರದಿಯಾಗಿಲ್ಲ. ದೈಹಿಕವಾಗಿ ಶೌಚಗುಂಡಿಗಳ ಸ್ವಚ್ಛತೆಯ ಸಂದರ್ಭದ ಸಾವುಗಳನ್ನು ಸರಕಾರವು ಗುರುತಿಸುವುದಿಲ್ಲ, ಬದಲಿಗೆ ಅವುಗಳನ್ನು ಸೆಪ್ಟಿಕ್ ಟ್ಯಾಂಕ್ಗಳು ಮತ್ತು ಒಳಚರಂಡಿಗಳ ಅಪಾಯಕಾರಿ ಸ್ವಚ್ಛತೆ ಸಂದರ್ಭದ ಸಾವುಗಳೆಂದು ಪರಿಗಣಿಸುತ್ತದೆ ಎಂದು ತಿಳಿಸಿದ್ದರು.
ಸರಕಾರದ ಉತ್ತರವು ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವವರ ಬಗ್ಗೆ ಸಂಪೂರ್ಣ ನಿರಾಸಕ್ತಿಯನ್ನು ತೋರಿಸುತ್ತದೆ ಎಂದು ಸಾಮಾಜಿಕ ಹೋರಾಟಗಾರರು ಬಣ್ಣಿಸಿದ್ದಾರೆ. ಒಳಚರಂಡಿಗಳನ್ನು ಸ್ವಚ್ಛಗೊಳಿಸುವಾಗ 340 ಜನರು ಮೃತಪಟ್ಟಿದ್ದಾರೆ ಎಂದು ಸ್ವತಃ ಸಚಿವರೇ ಒಪ್ಪಿಕೊಂಡಿದ್ದರು ಎಂದು ನೆನಪಿಸಿದ ಮಲ ಹೊರುವ ಪದ್ಧತಿಯ ನಿರ್ಮೂಲನಕ್ಕಾಗಿ ಶ್ರಮಿಸುತ್ತಿರುವ ಸಫಾಯಿ ಕರ್ಮಚಾರಿ ಆಂದೋಲನ್ನ ರಾಷ್ಟ್ರೀಯ ಸಂಚಾಲಕ ಬೆಜವಾಡ ವಿಲ್ಸನ್,ಅವರು ಈಗ ಒಣ ಶೌಚಾಲಯಗಳನ್ನು ಮಲ ಹೊರುವ ಪದ್ಧತಿಯೆಂದು ಪರಿಗಣಿಸಿ ತಾಂತ್ರಿಕ ಹೇಳಿಕೆಯನ್ನು ನೀಡುತ್ತಿದ್ದಾರೆ.
ಹೀಗಾಗಿ ಒಣ ಶೌಚಾಲಯಗಳಲ್ಲಿ ಜನರು ಸಾಯದಿರಬಹುದು,ಆದರೆ ಸೆಪ್ಟಿಕ್ ಟ್ಯಾಂಕ್ಗಳಲ್ಲಿ ಜನರು ಸಾಯುತ್ತಿದ್ದಾರೆ ಎನ್ನುವುದನ್ನು ತನ್ನ ಹೇಳಿಕೆಯಲ್ಲಿ ಅವರು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಸರಕಾರವು ಪ್ರತಿಯೊಂದನ್ನೂ ನಿರಾಕರಿಸುತ್ತಿದೆ. ಇದೇ ರೀತಿ ಮಲ ಹೊರುವ ವೃತ್ತಿಯಿಂದ ಸಾವುಗಳು ಸಂಭವಿಸುತ್ತಿರುವುದನ್ನು ಸಚಿವರು ನಿರಾಕರಿಸುತ್ತಿದ್ದಾರೆ ಎಂದರು.
ಇದು ಸರಕಾರಕ್ಕೆ ನ್ಯಾಯವಲ್ಲ. ಈ ಜನರನ್ನು ನಾವು ಕೊಲ್ಲುವಾಗ ಕೆಲವು ತಪ್ಪುಗಳು ಇದಕ್ಕೆ ಕಾರಣ ಮತ್ತು ಇವುಗಳನ್ನು ನಾವು ತಡೆಯುತ್ತೇವೆ ಎಂದು ಹೇಳುವ ಧೈರ್ಯವೂ ನಮಗಿರಬೇಕು. ಸರಕಾರವು ಈ ಜನರಿಗೆ ಘನತೆಯ ಮೂಲಭೂತ ಹಕ್ಕನ್ನು ನಿರಾಕರಿಸುತ್ತಿದೆ ಮತ್ತು ಅದು ಸಾವುಗಳ ಲೆಕ್ಕವನ್ನೂ ಇಡುವುದಿಲ್ಲ. ಇದು ದಲಿತರ ಬದುಕನ್ನು ಕಡೆಗಣಿಸುವ ಅಸ್ಪಶ್ಯತೆಯ ಆಧುನಿಕ ರೂಪವಾಗಿದೆ ಎಂದೂ ವಿಲ್ಸನ್ ಹೇಳಿದರು.







