ಜಾರ್ಖಂಡ್ ಬಳಿಕ ಉತ್ತರಪ್ರದೇಶದ ಸರದಿ: ನ್ಯಾಯಾಧೀಶರ ಕಾರಿಗೆ ಇನ್ನೊಂದು ಕಾರಿನಿಂದ ಹಲವು ಬಾರಿ ಢಿಕ್ಕಿ

photo: investpolicy.com
ಲಕ್ನೋ,ಜು.30: ಜಾರ್ಖಂಡ್ ನ ಧನಬಾದ್ನಲ್ಲಿ ಆಟೋರಿಕ್ಷಾ ಢಿಕ್ಕಿ ಹೊಡೆಸಿ ನ್ಯಾಯಾಧೀಶರೋರ್ವರನ್ನು ಕೊಲೆಗೈದ ಬೆನ್ನಿಗೇ ಈಗ ಉತ್ತರ ಪ್ರದೇಶದಲ್ಲಿ ಅಂತಹುದೇ ಪ್ರಯತ್ನ ನಡೆದಿದ್ದು, ಫತೇಪುರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮುಹಮ್ಮದ್ ಅಹ್ಮದ್ ಖಾನ್ ಅವರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಅವರ ಗನ್ ಮ್ಯಾನ್ ಗಾಯಗೊಂಡಿದ್ದು, ಕಾರಿಗೆ ತೀವ್ರ ಹಾನಿಯಾಗಿದೆ.
ಕೌಶಾಂಬಿಯ ಕೋಖ್ರಜ್ ಪ್ರದೇಶದ ಚಕ್ವಾನ್ ಗ್ರಾಮದ ಸಮೀಪ ಖಾನ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಇನ್ನೋವಾ ಕಾರೊಂದು ಹಲವಾರು ಬಾರಿ ಢಿಕ್ಕಿ ಹೊಡೆದಿದೆ. ತನ್ನನ್ನು ಕೊಲ್ಲಲು ಯಾರೋ ಪ್ರಯತ್ನಿಸಿದ್ದು,ಅದೊಂದು ರಸ್ತೆ ಅಪಘಾತವೆಂಬಂತೆ ಬಿಂಬಿಸಲು ಬಯಸಿದ್ದರು. ಇನ್ನೋವಾ ಕಾರು ತಾನು ಕುಳಿತಿದ್ದ ಬದಿಗೆ ಹಲವಾರು ಬಾರಿ ಢಿಕ್ಕಿ ಹೊಡೆದಿತ್ತು ಎಂದು ಖಾನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
2020 ಡಿಸೆಂಬರ್ನಲ್ಲಿ ಬರೇಲಿಯಲ್ಲಿ ಯುವಕನೋರ್ವನಿಗೆ ಜಾಮೀನು ತಿರಸ್ಕರಿದಾಗ ತನಗೆ ಜೀವ ಬೆದರಿಕೆಗಳು ಬಂದಿದ್ದವು ಎಂದು ಅವರು ತಿಳಿಸಿದ್ದಾರೆ. ಯುವಕ ಕೌಶಾಂಬಿ ನಿವಾಸಿಯಾಗಿದ್ದಾನೆ.
ಇನ್ನೋವಾ ಕಾರನ್ನು ವಶಪಡಿಸಿಕೊಂಡಿರುವ ಪೊಲಿಸರು ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಗುರುವಾರ ಕಾರ್ಯನಿಮಿತ್ತ ಪ್ರಯಾಗರಾಜ್ ಗೆ ತೆರಳಿದ್ದ ಖಾನ್ ಫತೇಪುರಕ್ಕೆ ಮರಳುತ್ತಿರುವಾಗ ಈ ಘಟನೆ ನಡೆದಿದೆ.
=--------







