ಬಿಪಿಎಲ್ ಕುಟುಂಬಕ್ಕೆ ಸೀಮಿತವಾಗದೆ ಎಲ್ಲ ಮನೆಗೆಲಸದವರಿಗೆ 2 ಸಾವಿರ ರೂ.ಪರಿಹಾರ ನೀಡಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು, ಜು.30: ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರವಲ್ಲದೇ ಎಲ್ಲ ಮನೆಗೆಲಸದವರಿಗೆ 2 ಸಾವಿರ ರೂ.ಪರಿಹಾರ ನೀಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಮನೆಗೆಲಸದವರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯಿದೆ ಮತ್ತು ಸಂಬಂಧಿತ ನಿಯಮಗಳು 2009ರ ಅಡಿ ನೋಂದಣಿ ಮಾಡಲು ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಕೋವಿಡ್ ಲಾಕ್‍ಡೌನ್‍ನಿಂದಾಗಿ ಉದ್ಭವಿಸಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಸಂಘಟಿತ ವಲಯದ ಎಲ್ಲ ಕಾರ್ಮಿಕರಿಗೆ 2 ಸಾವಿರ ಪಾವತಿಸುವ ಸಂಬಂಧ ಮೇ 20ರಂದು ರಾಜ್ಯ ಸರಕಾರ ಆದೇಶ ಹೊರಡಿಸಿತ್ತು.
ಅದರೆ, ಬಡತನ ರೇಖೆಯಡಿ ಬರುವ ಕಾರ್ಮಿಕರಿಗೆ ಮಾತ್ರ 2 ಸಾವಿರ ರೂ. ಪಾವತಿಸಲಾಗುವುದು ಎಂದು ರಾಜ್ಯ ಸರಕಾರವು ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿತ್ತು. ಇದನ್ನು ಎಲ್ಲ ಮನೆಗೆಲಸದವರಿಗೂ ವಿಸ್ತರಿಸುವುದನ್ನು ಸರಕಾರ ಪರಿಗಣಿಸಬೇಕು ಎಂದು ಸಿಜೆ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.
ಬಿಪಿಎಲ್ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಹೇಳಿದ್ದ ಸರಕಾರದ ನಿಲುವಿಗೆ ವಕೀಲ ಕ್ಲಿಫ್ಟನ್ ಡಿ ರೊಜಾರಿಯೊ ವಿರೋಧ ವ್ಯಕ್ತಪಡಿಸಿದರು. ತಮ್ಮ ನಿಲುವನ್ನು ಸಮರ್ಥಿಸಲು ಅವರು ಜೂ.30ರ ತೀರ್ಪನ್ನು ಆಧರಿಸಿದ್ದರು.
ಕೋವಿಡ್ ಮೊದಲ ಮತ್ತು ಎರಡನೇ ಅಲೆಯಿಂದ ಈ ವಿಭಾಗದ ಕೆಲಸಗಾರರು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಸಾಂಕ್ರಾಮಿಕತೆಯಿಂದಾಗಿ ಬಡತನ ರೇಖೆಯಡಿ ಇಲ್ಲದವರೂ ಬಿಪಿಎಲ್ ಅಡಿ ಸೇರುವಂತಾಗಿದೆ ಎಂಬುದಕ್ಕೆ ಉದಾಹರಣೆಗಳಿವೆ ಎಂದು ಪೀಠ ಆದೇಶದಲ್ಲಿ ದಾಖಲಿಸಿತು.
ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ಘೋಷಿಸಿರುವ 2 ಸಾವಿರ ಪಡೆಯುವ ಸಂಬಂಧ ಅಸಂಘಟಿತ ವಲಯದ ಜನರು ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಲು ಇರುವ ಪ್ರಾಯೋಗಿಕ ಸಾಧ್ಯತೆಗಳ ಬಗ್ಗೆ ಸರಕಾರವನ್ನು ಹೈಕೋರ್ಟ್ ಪ್ರಶ್ನಿಸಿತ್ತು.







