ಆನೆ ದಾಳಿಗೆ ನೀಡುವ ಬೆಳೆ ಪರಿಹಾರ ಪರಿಷ್ಕರಣೆಯಾಗಬೇಕು: ಎಚ್.ಡಿ.ಕುಮಾರಸ್ವಾಮಿ

ರಾಮನಗರ, ಜು.30: ರಾಮನಗರ ಜಿಲ್ಲಾ ಪಧಾನ ಬೆಳೆಗಳಾದ ತೆಂಗು, ರಾಗಿ, ಭತ್ತ ಬೆಳೆಗಳು ಆನೆ ದಾಳಿಯಿಂದ ನಾಶವಾದಾಗ ರಾಗಿ-1200 ರೂ, ಭತ್ತ-1320 ರೂ, ತೆಂಗು(10 ವರ್ಷ ಮೇಲ್ಪಟ್ಟ ಮರಗಳಿಗೆ) 2000 ರೂ, 5 ವರ್ಷದ ವರೆಗೆ 400 ರೂ, 5 ರಿಂದ 10 ವರ್ಷದವರೆಗೆ 800 ರೂ. ನಿಗಧಿಯಾಗಿದ್ದು, ದರವನ್ನು ಪರಿಷ್ಕರಿಸುವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾನವ ಪ್ರಾಣಿ ಸಂಘರ್ಷ ತಡೆಗಟ್ಟುವ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ಕಳೆದ 3 ವರ್ಷಗಳಲ್ಲಿ ಆನೆ ದಾಳಿಯಿಂದ 12 ಜನ ಮೃತಪಟ್ಟಿದ್ದಾರೆ. ಜಿಲ್ಲೆಗೆ ಸಂಬಂಧಿಸಿದಂತೆ ಮಾನವ ಆನೆ ಸಂಘರ್ಷವಿರುವ ವ್ಯಾಪ್ತಿ 299 ಕಿ.ಮೀ ಇದ್ದು, ಈಗಾಗಲೇ 110 ಕಿ.ಮೀ ಬ್ಯಾರಿಯರ್ ನಿರ್ಮಾಣವಾಗಿದ್ದು, 179 ಕಿ.ಮೀ ಗಡಿಯಲ್ಲಿ ಬ್ಯಾರಿಯರ್ ನಿರ್ಮಾಣವಾಗಬೇಕಿದೆ. ಇದಕ್ಕೆ 81 ಕೋಟಿ ರೂ. ಅವಶ್ಯಕವಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದರು.
ಹಾರೋಹಳ್ಳಿ, ಬಿಡದಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಭೆ ಕರೆದು ಸಿ.ಎಸ್.ಆರ್ ಯೋಜನೆಯಡಿ 3 ರಿಂದ 4 ಕೋಟಿ ರೂ.ಹಣ ಸಂಗ್ರಹಿಸಿ ಇದರಿಂದ ರೈತರ ಜಮೀನಿನಲ್ಲಿ ಬೆಳೆ ನಾಶ ಹಾಗೂ ಆನೆ-ಮಾನವ ಸಂಘರ್ಷ ತಡೆಯಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಕುಮಾರಸ್ವಾಮಿ ತಿಳಿಸಿದರು.
ರಾಮನಗರ ವಿಭಾಗ ಉಪ ಅರಣ್ಯಸಂರಕ್ಷಣಾಧಿಕಾರಿ ದೇವರಾಜು ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ರಾಮನಗರ ಪ್ರದೇಶಿಕ ವಿಭಾಗ-21 ಕಿ.ಮೀ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ-171 ಕಿ.ಮೀ ಹಾಗೂ ಕಾವೇರಿ ವನ್ಯಜೀವಿ ಧಾಮ-107 ಕಿ.ಮೀ ಒಟ್ಟು -299 ಕಿ.ಮೀ.ನ್ನು ಆನೆ ಸಂಘರ್ಷವಿರುವ ಅರಣ್ಯ ಗಡಿ ಎಂದು ಗುರುತಿಸಲಾಗಿದೆ ಎಂದರು.
ಕಳೆದ 3 ವರ್ಷಗಳಲ್ಲಿ ರಾಮನಗರ ಜಿಲ್ಲೆಯಲ್ಲಿರುವ 3 ವಿಭಾಗದಲ್ಲಿ 2018-19 ನೇ ಸಾಲಿನಲ್ಲಿ 3479 ರೈತರಿಗೆ 1.98 ಕೋಟಿ ರೂ., 2019-20 ಸಾಲಿನಲ್ಲಿ 3347 ರೈತರಿಗೆ 1.69 ಕೋಟಿ ರೂ. ಹಾಗೂ 2020-21 ಸಾಲಿನಲ್ಲಿ 4396 ರೈತರಿಗೆ 2.73 ಕೋಟಿ ರೂ. ಒಟ್ಟು 11,222 ರೈತರಿಗೆ 6.40 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮಾನವ-ಆನೆ ಸಂಘರ್ಷ ತಡೆಗಟ್ಟಲು ಗಡಿಯಲ್ಲಿ ಬ್ಯಾರಿಯರ್ ನಿರ್ಮಾಣದಲ್ಲಿ ಸಂಗಮ ವನ್ಯಜೀವಿ ವಲಯದ ಚಿಕ್ಕಮುದುಡೆ ಗ್ರಾಮದ ಸರ್ವೆ ನಂ.26 ರಲ್ಲಿ ಒಟ್ಟು 33 ಎಕರೆ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು, ಸ್ಥಳೀಯ ಗ್ರಾಮಸ್ಥರ ತಕರಾರಿದೆ. ಸಂಗಮ ವನ್ಯಜೀವಿ ವಲಯದ ದಂತೂರು ಗ್ರಾಮದ ಸರ್ವೆ ನಂ.15 ರಲ್ಲಿ ಪೆÇೀಡಿಯಾಗಿರುವ ಜಮೀನಿನ ಬಗ್ಗೆ ತಕಾರಾರಿದೆ. ಕೋಡಿಹಳ್ಳಿ ವನ್ಯಜೀವಿ ವಲಯದಲ್ಲಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನವಾಗಿರುವ ಅರಣ್ಯ ಗ್ರಾಮಗಳಲ್ಲಿ ಗೊಂದಲಗಳಿವೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಶಾಸಕ ಮಂಜುನಾಥ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯ ಜೀವಿ ಪರಿಪಾಲಕ ವಿಜಯ್ ಕುಮಾರ್ ಗೋಗಿ, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ. ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಬೆಂಗಳೂರು ವಿಭಾಗ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶ್, ಡಿ.ಸಿ.ಎಫ್ ರಮೇಶ್ ಕುಮಾರ್ ಹಾಗೂ ಗಿರೀಶ್ ಉಪಸ್ಥಿತರಿದ್ದರು.







