ಶಾಶ್ವತ ರಾಜಕೀಯ ಇತ್ಯರ್ಥದ ಉಪಕ್ರಮಗಳಿಗೆ ಬೆಂಬಲ: ಅಪಘಾನಿಸ್ತಾನಕ್ಕೆ ಭಾರತದ ಭರವಸೆ
ಹೊಸದಿಲ್ಲಿ, ಜು.30: ಸಾರ್ವಭೌಮ, ಪ್ರಜಾತಂತ್ರವಾದಿ ಮತ್ತು ಶಾಂತಿಯುತವಾದ ಅಪಘಾನಿಸ್ತಾನಕ್ಕೆ ನೆರವು ನೀಡುವ ದೃಢ ನೀತಿಯನ್ನು ಭಾರತ ಹೊಂದಿದೆ ಮತ್ತು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಸಹಭಾಗಿಗಳೊಂದಿಗೆ ನಿಕಟ ಸಂಪರ್ಕ ಹೊಂದಲಾಗಿದೆ ಎಂದು ಭಾರತ ಹೇಳಿದೆ.
ಅಪಘಾನಿಸ್ತಾನದಲ್ಲಿ ಶಾಶ್ವತ ರಾಜಕೀಯ ಇತ್ಯರ್ಥದ ನಿಟ್ಟಿನಲ್ಲಿ, ಅಪಘಾನ್ ನೇತೃತ್ವದಲ್ಲಿ, ಅಪಘಾನ್ ನಿಯಂತ್ರಣದಲ್ಲಿ ನಡೆಯುವ ಉಪಕ್ರಮಗಳಿಗೆ ಭಾರತದ ಬೆಂಬಲವಿದೆ ಎಂದು ವಿದೇಶ ವ್ಯವಹಾರ ಇಲಾಖೆಯ ಸಹಾಯಕ ಸಚಿವ ವಿ ಮುರಳೀಧರನ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಕಾರ್ಯತಂತ್ರದ ಪಾಲುದಾರರು ಹಾಗೂ ನೆರೆಹೊರೆಯ ದೇಶವಾಗಿರುವ ಭಾರತವು ಸಾರ್ವಭೌಮ, ಪ್ರಜಾತಂತ್ರವಾದಿ ಮತ್ತು ಶಾಂತಿಯುತವಾದ ಅಪಘಾನಿಸ್ತಾನಕ್ಕೆ ನೆರವು ನೀಡುವ ದೃಢ ನೀತಿಯನ್ನು ಹೊಂದಿದೆ. ಮಹಿಳೆಯರು ಮಕ್ಕಳು, ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೂ ಭದ್ರತೆ ದೊರಕಬೇಕು ಎಂಬುದು ಭಾರತದ ನಿಲುವಾಗಿದೆ. ಸಮೃದ್ಧ ದೇಶ
ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಜನರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕಾಗಿದೆ ಎಂದ ಅವರು, ಕಳೆದ ವರ್ಷ ದೋಹದಲ್ಲಿ ನಡೆದ ಅಪಘಾನ್ ಮಾತುಕತೆಯ ಆರಂಭಿಕ ಕಲಾಪದಲ್ಲಿ ಭಾರತದ ವಿದೇಶ ಸಚಿವ ಎಸ್ ಜೈಶಂಕರ್ ಆನ್ಲೈನ್ ಮೂಲಕ ಪಾಲ್ಗೊಂಡಿರುವುದನ್ನು ಉಲ್ಲೇಖಿಸಿದರು.
ಈ ಮಾತುಕತೆಯಲ್ಲಿ ಅಪಘಾನ್ ಸರಕಾರ, ತಾಲಿಬಾನ್ ಸಹಿತ ಅಪಘಾನ್ಗೆ ಸಂಬಂಧಿಸಿದ ವಿವಿಧ ತಂಡಗಳು ಪಾಲ್ಗೊಂಡಿದ್ದವು. ಬುಧವಾರ ಹೊಸದಿಲ್ಲಿಯಲ್ಲಿ ಜೈಶಂಕರ್ ಹಾಗೂ ಅಮೆರಿಕದ ವಿದೇಶ ವ್ಯವಹಾರ ಸಚಿವ ಆ್ಯಂಟನಿ ಬ್ಲಿಂಕನ್ ನಡುವಿನ ಮಾತುಕತೆ ಸಂದರ್ಭ ಅಪಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆದಿದೆ. ಅಪಘಾನ್ ಬಿಕ್ಕಟ್ಟಿಗೆ ಸೇನಾ ಕಾರ್ಯಾಚರಣೆಯ ಮೂಲಕ ಪರಿಹಾರ ಸಾಧ್ಯವಿಲ್ಲ. ಅಪಘಾನಿಸ್ತಾನದ ಸ್ಥಿರತೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾರತ ಗಮನಾರ್ಹ ಪಾತ್ರ ವಹಿಸಬೇಕಿದೆ ಎಂದು ಬ್ಲಿಂಕನ್ ಹೇಳಿದ್ದರು.







