ಮಂಗಳೂರು: ಖಾಸಗಿ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರತಿಭಟನೆ

ಮಂಗಳೂರು, ಜು.31: ಖಾಸಗಿ ಬಸ್ ಪ್ರಯಾಣ ದರ ಏರಿಕೆಯನ್ನು ವಿರೋಧಿಸಿ ಮತ್ತು ದ.ಕ. ಜಿಲ್ಲಾಡಳಿತದ ತೀರ್ಮಾನವನ್ನು ಖಂಡಿಸಿ ಸಿಪಿಎಂ, ಡಿವೈಎಫ್‌ಐ, ಜೆಎಂಎಸ್ ಸಂಘಟನೆ ಶನಿವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕೊರೋನ ಸಂಕಷ್ಟ ಕಾಲದಲ್ಲಿ ಕನಿಕರ ತೋರಬೇಕಾಗಿದ್ದ ಖಾಸಗಿ ಬಸ್ ಮಾಲಕರು ಮತ್ತು ಜಿಲ್ಲಾಡಳಿತ ಏಕಾಏಕಿ ಬಸ್ ಪ್ರಯಾಣ ದರ ಏರಿಸಿವೆ. ಬಸ್ ಪ್ರಯಾಣ ದರಕ್ಕೆ ಸಂಬಂಧಿಸಿ ದ.ಕ.ಜಿಲ್ಲಾಡಳಿತ ಒಂದು ಕ್ರಮವನ್ನು ಅನುಸರಿಸಿಕೊಂಡು ಬಂದಿದೆ. ಅದರದ್ದೇ ಆದ ಇತಿಹಾಸವಿದೆ. ಅದನ್ನು ಜಿಲ್ಲಾಧಿಕಾರಿ ತಿಳಿದುಕೊಳ್ಳಬೇಕು. ಆದರೆ ಜಿಲ್ಲಾಧಿಕಾರಿ ಬಸ್ ಮಾಲಕರ ಸಂಘದ ವಿನಂತಿಯ ಮೇರೆಗೆ ಪ್ರಯಾಣಿಕರ ಅಹವಾಲುಗಳನ್ನು ಆಲಿಸದೆ, ಪ್ರಾಧಿಕಾರದ ಸಭೆ ಕರೆಯದೆ ಏಕಪಕ್ಷೀಯವಾಗಿ ಪ್ರಯಾಣ ದರ ಏರಿಸಿ ಅನ್ಯಾಯ ಎಸಗಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಸಿಪಿಎಂ, ಡಿವೈಎಫ್‌ಐ, ಜೆಎಂಎಸ್ ಸಂಘಟನೆಗಳ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ಜಯಂತಿ ಬಿ. ಶೆಟ್ಟಿ, ಭಾರತಿ ಬೋಳಾರ್, ಡಾ. ಕೃಷ್ಣಪ್ಪ ಕೊಂಚಾಡಿ, ಸಂತೋಷ್ ಬಜಾಲ್, ದಯಾನಂದ ಶೆಟ್ಟಿ, ಬಾಬು ದೇವಾಡಿಗ, ದಿನೇಶ್ ಶೆಟ್ಟಿ, ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣಿರುಬಾವಿ, ಯೋಗೀಶ್ ಜಪ್ಪಿನಮೊಗರು, ಮನೋಜ್ ವಾಮಂಜೂರು, ಸಾಮಾಜಿಕ ಕಾರ್ಯಕರ್ತ ಜೆರಾಲ್ಡ್ ಟವರ್ ಮತ್ತಿತರರು ಪಾಲ್ಗೊಂಡಿದ್ದರು.













