ವಿ.ವಿ. ಸಂಧ್ಯಾಕಾಲೇಜು: ಬೀಳ್ಕೊಡುಗೆ ಸಮಾರಂಭ

ಮಂಗಳೂರು, ಜು.30: ವಿಶ್ವವಿದ್ಯಾನಿಲಯ ಸಂಧ್ಯಾಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜವಾನ ನಾಗೇಶ್ ಅವರ ಬೀಳ್ಕೊಡುಗೆ ಸಮಾರಂಭವು ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ, ವೃತ್ತಿ ಜೀವನದಲ್ಲಿ ಉತ್ತಮವಾದ ಭಾವನಾತ್ಮಕ ಸಂಬಂಧಗಳು ಬೆಳೆಯುತ್ತವೆ. ಅಂತಹ ಸಂಬಂಧಗಳು ನಮ್ಮ ಜೀವನದಲ್ಲಿ ಉನ್ನತ ಸ್ಥರದ ಕಾರ್ಯ ಕ್ಷಮತೆಗೆ ದಾರಿ ಮಾಡುತ್ತದೆ ಎನ್ನುವುದಕ್ಕೆ ನಾಗೇಶ್ ಉತ್ತಮ ಉದಾಹರಣೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಾಗೇಶ್ ದಂಪತಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಂಬಿಎ-ಎಂಕಾಂನ ಸಂಯೋಜಕ ಡಾ.ಜಗದೀಶ್ ಬಿ., ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ., ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕ, ಡಾ. ದೇವದಾಸ್ ಪೈ ಅವರ ಸೇವಾ ಮನೋಭಾವನೆಯನ್ನು ಪ್ರಶಂಸಿದರು.
ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಲತಾ ಕೆ.ವಿ. ಸ್ವಾಗತಿಸಿ, ವಾಣಿಜ್ಯ ವಿಭಾಗ ಉಪನ್ಯಾಸಕ ರಾಘವೇಂದ್ರ ವಂದಿಸಿದರು. ಕನ್ನಡ ಉಪನ್ಯಾಸಕಿ ದುರ್ಗಾ ಮೆನನ್ ಪ್ರಸ್ತಾವನೆಗೈದು, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಅಶ್ವಿನಿ ನಾಗೇಶ್ ವೃತ್ತಿ ಜೀವನದ ಆಯ್ದ ಚಿತ್ರಗಳ ವೀಡಿಯೋವನ್ನು ಪ್ರಸ್ತುತ ಪಡಿಸಿದರು. ಆಂಗ್ಲ ವಿಭಾಗದ ಉಪನ್ಯಾಸಕಿ ಜೋಯ್ಸಾ ನಿರೂಪಿಸಿದರು.







