ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಏರಿಕೆ: ಕಠಿಣ ನಿರ್ಬಂಧಗಳಿಗೆ ಕೇಂದ್ರದ ಸೂಚನೆ

ಹೊಸದಿಲ್ಲಿ, ಜು.31: ಹತ್ತು ರಾಜ್ಯಗಳಲ್ಲಿ ಹೊಸ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಪಾಸಿಟಿವಿಟಿ ದರ ಶೇ.10ಕ್ಕೂ ಅಧಿಕವಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳನ್ನು ಹೇರುವ ಅಗತ್ಯವಿದೆ ಎಂದು ಕೇಂದ್ರವು ಶನಿವಾರ ಹೇಳಿದೆ.
ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಶೇ.80ರಷ್ಟು ಸಾವುಗಳು 60 ವರ್ಷ ಮೇಲ್ಪಟ್ಟವರು ಮತ್ತು 45ರಿಂದ 60 ವರ್ಷ ವಯೋಮಾನದವರಲ್ಲಿ ಸಂಭವಿಸಿರುವುದರಿಂದ ಈ ದುರ್ಬಲ ಗುಂಪುಗಳಿಗೆ ಲಸಿಕೆ ನೀಡಿಕೆಯನ್ನು ತ್ವರಿತಗೊಳಿಸುವಂತೆ ಕೇಂದ್ರವು ರಾಜ್ಯಗಳಿಗೆ ಸೂಚಿಸಿದೆ. ಸಂಭಾವ್ಯ ಮೂರನೇ ಅಲೆಯ ಕುರಿತು ಹೆಚ್ಚುತ್ತಿರುವ ಕಳವಳಗಳ ನಡುವೆಯೇ ಕೇಂದ್ರ ಸರಕಾರದ ಈ ಎಚ್ಚರಿಕೆ ಹೊರಬಿದ್ದಿದೆ.
ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಅಸ್ಸಾಂ, ಮಿಜೋರಮ್, ಮೇಘಾಲಯ, ಮಣಿಪುರ ಮತ್ತು ಆಂಧ್ರಪ್ರದೇಶಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿದೆ ಅಥವಾ ಪಾಸಿಟಿವಿಟಿ ದರ ಏರಿಕೆಯಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಆರೋಗ್ಯ ಸಚಿವಾಲಯವು,46 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತ ಅಧಿಕವಾಗಿದ್ದು,53 ಜಿಲ್ಲೆಗಳಲ್ಲಿ ಶೇ.5ರಿಂದ ಶೇ.10ರ ನಡುವೆ ಇದೆ. ಹೀಗಾಗಿ ರಾಜ್ಯಗಳು ಪರೀಕ್ಷೆಗಳನ್ನು ಹೆಚ್ಚಿಸಬೇಕು. ಈ ಹಂತದಲ್ಲಿ ಯಾವುದೇ ಅಜಾಗರೂಕತೆಯು ಈ ಜಿಲ್ಲೆಗಳಲ್ಲಿ ಸ್ಥಿತಿ ಇನ್ನಷ್ಟು ಹದಗೆಡುವಂತೆ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಶನಿವಾರ ಕರೆದಿದ್ದ ಸಭೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶಕ ಡಾ.ಬಲರಾಮ್ ಭಾರ್ಗವ್,ರಾಜ್ಯಗಳ ಹಿರಿಯ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕಳೆದ ಕೆಲವು ವಾರಗಳಿಂದ ಶೇ.10ಕ್ಕೂ ಅಧಿಕ ಪಾಸಿಟಿವಿಟಿ ದರ ವರದಿಯಾಗುತ್ತಿರುವ ಎಲ್ಲ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆಯ ತಡೆಗಾಗಿ ಜನರ ಚಲನವಲನಗಳನ್ನು ನಿಯಂತ್ರಿಸಲು,ಗುಂಪು ಸೇರುವುದನ್ನು ತಪ್ಪಿಸಲು ಮತ್ತು ಜನರು ಪರಸ್ಪರ ಸೇರುವುದನ್ನು ನಿವಾರಿಸಲು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರುವುದು ಅಗತ್ಯವಾಗಿದೆ. ಈ ರಾಜ್ಯಗಳಲ್ಲಿ ವರದಿಯಾಗಿರುವ ಹೊಸ ರೋಗಿಗಳಲ್ಲಿ ಶೇ.80ರಷ್ಟು ಜನರು ಹೋಮ್ ಐಸೊಲೇಷನ್ನಲ್ಲಿದ್ದು, ಪ್ರಸರಣ ಸರಪಳಿಯನ್ನು ತುಂಡರಿಸಲು ಸ್ಥಳೀಯ ಅಧಿಕಾರಿಗಳು ಇಂತಹ ಪ್ರಕರಣಗಳ ಮೇಲೆ ನಿಗಾಯಿರಿಸಬೇಕು. ಇಂತಹ ರೋಗಿಗಳನ್ನು ಸಕಾಲಿಕ ಚಿಕಿತ್ಸೆಗಾಗಿ ಅಗತ್ಯವಾದರೆ ಆಸ್ಪತ್ರೆಗಳಿಗೆ ಸೇರಿಸುವ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸಚಿವಾಲಯವು ತಿಳಿಸಿದೆ.
ಎರಡನೇ ಅಲೆ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯಾಗಿದ್ದ ಹಿನ್ನೆಲೆಯಲ್ಲಿ ಸಚಿವಾಲಯವು ಪಿಎಸ್ಎ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಖಾಸಗಿ ಆಸ್ಪತ್ರೆಗಳಿಗೆ ನೆನಪಿಸುವಂತೆಯೂ ರಾಜ್ಯಗಳಿಗೆ ಸೂಚಿಸಿದೆ.







