ಚೀನಾದ ಹಲವೆಡೆ ಕೊರೋನ ಡೆಲ್ಟಾ ಸೋಂಕು ಉಲ್ಬಣ: ಮತ್ತೆ ಕಠಿಣ ನಿರ್ಬಂಧ ಜಾರಿ

ಬೀಜಿಂಗ್, ಜು.31: ಕೊರೋನ ಸೋಂಕಿನ ಡೆಲ್ಟಾ ರೂಪಾಂತರ ಅತ್ಯಂತ ವೇಗವಾಗಿ ಮತ್ತು ಅಪಾಯಕಾರಿಯಾಗಿ ಹರಡುತ್ತಿದ್ದು ಇದು ಮಾರಣಾಂತಿಕವಾಗಿ ಹರಡುವ ಮುನ್ನ ನಿರ್ಬಂಧಕ ಕ್ರಮಗಳನ್ನು ಜಾರಿಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಚೀನಾ ಮತ್ತು ಆಸ್ಟ್ರೇಲಿಯಾ ದೇಶಗಳು ಶನಿವಾರ ಕಠಿಣ ನಿರ್ಬಂಧ ಜಾರಿಗೊಳಿಸುವುದಾಗಿ ಹೇಳಿವೆ.
ಚೀನಾದಲ್ಲಿ ಕಳೆದೊಂದು ತಿಂಗಳಿಂದ ಉಲ್ಬಣಗೊಂಡಿರುವ ಡೆಲ್ಟಾ ಸೋಂಕು ಶನಿವಾರ ಫುಜಿಯಾಂಗ್ ಪ್ರಾಂತ್ಯ, ಚಾಂಗ್ಕ್ವಿಂಗ್ ನಗರ ಸಹಿತ 5 ಪ್ರಾಂತ್ಯಗಳಿಗೆ ಹರಡಿದೆ. ನಾನ್ಜಿಂಗ್ ನಗರದಲ್ಲಿರುವ ಅಂತರಾಷ್ಟ್ರೀಯ ವಿಮಾನನಿಲ್ದಾಣದ 9 ಸ್ವಚ್ಛತಾ ಸಿಬಂದಿಗಳಲ್ಲಿ ಶನಿವಾರ ಸೋಂಕು ದೃಢಪಟ್ಟಿದ್ದು ನಗರದಲ್ಲಿ 200ಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ. 10 ಲಕ್ಷಕ್ಕೂ ಹೆಚ್ಚು ಜನರಿರುವ ಪ್ರದೇಶದಲ್ಲಿ ಲಾಕ್ಡೌನ್ ವಿಧಿಸುವ ಮೂಲಕ ಹಾಗೂ ಸಾಮೂಹಿಕ ಪರೀಕ್ಷಾ ಅಭಿಯಾನದ ಮೂಲಕ ಮಾರಣಾಂತಿಕ ಸೋಂಕು ರೋಗ ಹರಡುವುದನ್ನು ನಿಯಂತ್ರಿಸಲು ಸರಕಾರ ಮುಂದಾಗಿದೆ.
ಮೊದಲು ಭಾರತದಲ್ಲಿ ಪತ್ತೆಯಾದ ಡೆಲ್ಟಾ ರೂಪಾಂತರಿತ ಸೋಂಕು ಈಗ 132 ದೇಶಗಳು ಹಾಗೂ ಪ್ರದೇಶಗಳಿಗೆ ವ್ಯಾಪಿಸಿದೆ. ಡೆಲ್ಟಾ ನಮಗೊಂದು ಎಚ್ಚರಿಕೆಯಾಗಿದೆ. ಸೋಂಕು ವಿಕಸನಗೊಳ್ಳುತ್ತಿರುವ ಎಚ್ಚರಿಕೆಯಷ್ಟೇ ಅಲ್ಲ, ಇದಕ್ಕಿಂತಲೂ ಅಪಾಯಕಾರಿ ರೂಪಾಂತರ ಉತ್ಪತ್ತಿಯಾಗುವ ಮುನ್ನವೇ ಎಚ್ಚೆತ್ತುಕೊಂಡು ನಿರ್ಬಂಧ ಕ್ರಮಗಳನ್ನು ಕೈಗೊಳ್ಳಬೇಕೆಂಬ ಎಚ್ಚರಿಕೆಯೂ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಪರಿಸ್ಥಿತಿ ವಿಭಾಗದ ನಿರ್ದೇಶಕ ಮೈಕೆಲ್ ರಯಾನ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಪಾಲನೆ , ಸ್ಯಾನಿಟೈಸರ್ಸ್ ಬಳಕೆ, ಕೈತೊಳೆಯುವುದು - ಈ ಗೇಮ್ಪ್ಲ್ಯಾನ್ ಈಗಲೂ ಅನ್ವಯಿಸುತ್ತದೆ ಎಂದವರು ಹೇಳಿದ್ದಾರೆ.
ಈ ಮಧ್ಯೆ, ವಿಶ್ವದಾದ್ಯಂತ ಕೊರೋನ ಸೋಂಕಿನ ಪ್ರಕರಣ ಮತ್ತೆ ಹೆಚ್ಚುತ್ತಿರುವ ಲಕ್ಷಣ ಕಂಡುಬಂದಿದ್ದು, 6 ಆರೋಗ್ಯವಲಯಗಳ ಪೈಕಿ 5ರಲ್ಲಿ ಕಳೆದ 4 ವಾರಗಳಲ್ಲಿ ಸೋಂಕಿನ ಪ್ರಮಾಣ ಸರಾಸರಿ 80% ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಜನಸಂಖ್ಯೆಯ ಕೇವಲ 14% ಮಂದಿ ಮಾತ್ರ ಲಸಿಕೆ ಪಡೆದಿರುವ ಆಸ್ಟ್ರೇಲಿಯಾದ 3ನೇ ಬೃಹತ್ ನಗರವಾದ ಬ್ರಿಸ್ಬೇನ್, ಹಾಗೂ ಕ್ವೀನ್ಸ್ಲ್ಯಾಂಡ್ ರಾಜ್ಯದಲ್ಲಿ, ಡೆಲ್ಟಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತೆ ಕಠಿಣ ಲಾಕ್ಡೌನ್ ಜಾರಿಯಾಗಿದೆ.
ಜುಲೈ 4ರ ಸ್ವಾತಂತ್ರ್ಯ ದಿನ ಸಂಭ್ರಮಾಚರಣೆಯ ಬಳಿಕ ಅಮೆರಿಕದಲ್ಲೂ ಡೆಲ್ಟಾ ರೂಪಾಂತರಿತ ಸೋಂಕು ತೀವ್ರಗತಿಯಲ್ಲಿ ಉಲ್ಬಣಗೊಳ್ಳುತ್ತಿದ್ದು, ಅಪಾಯದ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ಮಾಸ್ಕ್ ಧಾರಣೆ ನಿಯಮವನ್ನು ಮರು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ಮಧ್ಯೆ, ಅಮೆರಿಕದಲ್ಲಿ ಮತ್ತೆ ಕಠಿಣ ನಿರ್ಬಂಧ ಜಾರಿಯಾಗುವುದೇ ಎಂದು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಅಧ್ಯಕ್ಷ ಜೋ ಬೈಡೆನ್ ‘ಎಲ್ಲಾ ಸಂಭವನೀಯತೆ ಇದೆ’ ಎಂದು ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.
ಲಸಿಕೆ ಪಡೆದವರೂ ಸುರಕ್ಷಿತರಲ್ಲ
ಈ ಮಧ್ಯೆ, ಕೊರೋನ ಸೋಂಕಿನ ವಿರುದ್ಧದ 2 ಡೋಸ್ ಲಸಿಕೆ ಪಡೆದವರೂ ಡೆಲ್ಟಾ ರೂಪಾಂತರಿತ ಸೋಂಕಿಗೆ ತುತ್ತಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ ಬಿಡುಗಡೆಗೊಳಿಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಲಸಿಕೆಗಳು ತೀವ್ರ ಕಾಯಿಲೆ ಮತ್ತು ಮರಣದ ವಿರುದ್ಧ ಪರಿಣಾಮಕಾರಿಯಾಗಿದ್ದರೂ, ಡೆಲ್ಟಾ ಸೋಂಕಿನಿಂದಾಗಿ ಈಗ ಯುದ್ಧ ಬದಲಾಗಿದೆ.
ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಈಶಾನ್ಯ ರಾಜ್ಯ ಮೆಸಚುಸೆಟ್ಸ್ನಲ್ಲಿ, ಸೋಂಕು ದೃಢಪಟ್ಟಿರುವವರಲ್ಲಿ 75% ಮಂದಿ ಕೊರೋನ ವಿರುದ್ಧದ ಎರಡೂ ಡೋಸ್ ಲಸಿಕೆ ಪಡೆದವರಾಗಿದ್ದಾರೆ .ಡೆಲ್ಟಾ ಸೋಂಕು ಸಿಡುಬು ರೋಗದಂತೆ ವೇಗವಾಗಿ ಹರಡಬಹುದು ಎಂದು ಶುಕ್ರವಾರ ಬಿಡುಗಡೆಯಾದ ವರದಿ ಹೇಳಿದೆ.
ಪ್ರವಾಸಿಧಾಮ ಬಂದ್ ಮಾಡಲು ಸೂಚನೆ
ಚೀನಾದಲ್ಲಿ ಮಾರಕ ಡೆಲ್ಟಾ ರೂಪಾಂತರಿತ ಸೋಂಕು ಶನಿವಾರ ಮತ್ತೂ ಎರಡು ಪ್ರಾಂತ್ಯಗಳಿಗೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ ನಾನ್ಜಿಂಗ್ ನಗರದಲ್ಲಿರುವ ಪ್ರವಾಸಿಧಾಮ ಹಾಗೂ ಸಾಂಸ್ಕೃತಿಕ ಕೇಂದ್ರಗಳನ್ನು ಬಂದ್ ಮಾಡಲು ಅಧಿಕಾರಿಗಳು ಸೂಚಿಸಿರುವುದಾಗಿ ವರದಿಯಾಗಿದೆ.
ಬೆಟ್ಟಗಳು, ಜಲಪಾತ, ಕಲ್ಲಿನಿಂದ ನಿರ್ಮಿಸಿದ ನಗರ, ಕಲ್ಲಿನ ಗೋಡೆ ಮತ್ತಿತರ ಆಕರ್ಷಕ ಪ್ರವಾಸಿಸ್ಥಳಗಳನ್ನು ಸಂದರ್ಶಿಸಲು ನಾನ್ಜಿಂಗ್ ನಗರಕ್ಕೆ ವಿಶ್ವದೆಲ್ಲೆಡೆಯ ಪ್ರವಾಸಿಗರು ಆಗಮಿಸುತ್ತಾರೆ. ಕೊರೋನ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದ್ದ ಚೀನಾ ಸರಕಾರ, ಇತ್ತೀಚೆಗಷ್ಟೇ ಈ ನಗರವನ್ನು ಪ್ರವಾಸಿಗರ ಭೇಟಿಗೆ ಮುಕ್ತವಾಗಿಸಿತ್ತು. ಹನಾನ್ ಪ್ರಾಂತ್ಯದಲ್ಲಿರುವ ಮತ್ತೊಂದು ಪ್ರವಾಸಿತಾಣ ಝಾಂಗ್ಜಿಜಾಯ್ನಲ್ಲಿ ನಡೆದ ಕಾರ್ಯಕ್ರಮವೊಂದರಿಂದ ಸೋಂಕು ಉಲ್ಬಣಗೊಂಡಿದೆ ಎನ್ನಲಾಗಿದ್ದು, ನಗರದಲ್ಲಿರುವ ಸುಮಾರು 1.5 ಮಿಲಿಯನ್ ಜನತೆ ಈಗ ಲಾಕ್ಡೌನ್ಗೆ ಒಳಗಾಗಿದ್ದಾರೆ. ಬೀಜಿಂಗ್ನ ಚಾಂಗ್ಪಿಂಗ್ ಜಿಲ್ಲೆಯ 9 ವಿಭಾಗಗಳಲ್ಲಿಯೂ ಲಾಕ್ಡೌನ್ ಜಾರಿಯಾಗಿದೆ ಎಂದು ಮೂಲಗಳು ಹೇಳಿವೆ.







