ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕಲಾಪಗಳಿಗೆ ವ್ಯತ್ಯಯ: 133 ಕೋಟಿ ರೂ.ಗೂ ಹೆಚ್ಚು ತೆರಿಗೆದಾರರ ಹಣ ಪೋಲು
ಮಾಹಿತಿ ನೀಡಿದ ಸರಕಾರಿ ಮೂಲಗಳು

ಹೊಸದಿಲ್ಲಿ, ಜು.31: ಪೆಗಾಸಸ್ ಬೇಹುಗಾರಿಕೆ ಹಗರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಸದ್ಯ ಶಮನಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಈ ನಡುವೆ, ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕಲಾಪಗಳಿಗೆ ವ್ಯತ್ಯಯಗಳಿಂದಾಗಿ 133 ಕೋ.ರೂ.ಗೂ ಹೆಚ್ಚಿನ ತೆರಿಗೆದಾರರ ಹಣ ಪೋಲಾಗಿದೆ ಎಂದು ಸರಕಾರದ ಮೂಲಗಳು ಶನಿವಾರ ತಿಳಿಸಿದವು.
ಜು.19ರಂದು ಸಂಸತ್ತು ಸಮಾವೇಶಗೊಂಡಾಗಿನಿಂದ ಪೆಗಾಸಸ್ ಹಗರಣದ ಕುರಿತು ಚರ್ಚೆ ಮತ್ತು ಸರ್ವೋಚ್ಚ ನ್ಯಾಯಾಲಯದ ಹಾಲಿ ಅಥವಾ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆಗೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.
ಈ ಆಗ್ರಹವನ್ನು ತಿರಸ್ಕರಿಸಿರುವ ಸರಕಾರವು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು ಈಗಾಗಲೇ ಸಂಸತ್ತಿನಲ್ಲಿ ಅಗತ್ಯ ಹೇಳಿಕೆಯನ್ನು ನೀಡಿದ್ದಾರೆ ಎಂದು ಪ್ರತಿಪಾದಿಸಿದೆ. ಪೆಗಾಸಸ್ ಸ್ಪೈವೇರ್ ಬಳಸಿ ಹ್ಯಾಕಿಂಗ್‌ನ ಸಂಭಾವ್ಯ ಗುರಿಗಳಲ್ಲಿ ವೈಷ್ಣವ ಕೂಡ ಸೇರಿದ್ದರು ಎನ್ನಲಾಗಿದೆ.
ಬಿಕ್ಕಟ್ಟಿನಿಂದಾಗಿ ಲೋಕಸಭೆಯು ಸಾಧ್ಯವಿದ್ದ 54 ಗಂಟೆಗಳ ಪೈಕಿ ಸುಮಾರು ಏಳು ಗಂಟೆ ಕಾಲವಷ್ಟೇ ಕಾರ್ಯ ನಿರ್ವಹಿಸಿದೆ ಮತ್ತು ರಾಜ್ಯಸಭೆಯಲ್ಲಿ ಸಾಧ್ಯವಿದ್ದ 53 ಗಂಟೆಗಳ ಪೈಕಿ ಕೇವಲ 11 ಗಂಟೆಗಳ ಕಾಲ ಕಲಾಪಗಳನ್ನು ನಡೆಸಲು ಸಾಧ್ಯವಾಗಿದೆ ಎಂದು ಅನಾಮಿಕ ‘ಸರಕಾರಿ ಮೂಲಗಳ ’ ಮೂಲಕ ಶನಿವಾರ ಮಾಧ್ಯಮಗಳಿಗೆ ತಲುಪಿಸಲಾಗಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈವರೆಗೆ ಸಾಧ್ಯವಿದ್ದ 107 ಗಂಟೆಗಳಲ್ಲಿ ಕೇವಲ 18 ಗಂಟೆಗಳು ಮಾತ್ರ ಸಂಸತ್ತು ಕಾರ್ಯ ನಿರ್ವಹಿಸಲು ಸಾಧ್ಯವಾಗಿದ್ದು,89 ಗಂಟೆಗಳಷ್ಟು ಸಮಯವು ವ್ಯರ್ಥಗೊಂಡಿದೆ. ಆದರೆ ತೆರಿಗೆದಾರರ ಹಣದ ನಷ್ಟವು 133 ಕೋ.ರೂ.ಗೂ ಅಧಿಕವಾಗಿದೆ ಎಂದು ಹೇಳಿಕೆಯು ತಿಳಿಸಿದೆ.







