ದಲಿತ ಮುಖ್ಯಮಂತ್ರಿ ವಿಚಾರ: ಬಿಜೆಪಿಗೆ ಬುದ್ಧಿ ಹೇಳುವ ನೈತಿಕತೆ ಕಾಂಗ್ರೆಸ್‍ಗೆ ಇಲ್ಲ; ಕೆ.ಎಸ್. ಈಶ್ವರಪ್ಪ

ಬಾಗಲಕೋಟೆ, ಆ.1: ದಲಿತರನ್ನು ಮುಖ್ಯಮಂತ್ರಿ ಮಾಡಬೇಕೆಂದು ಬಿಜೆಪಿಗೆ ಬುದ್ಧಿ ಹೇಳುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ. ಅಲ್ಲದೆ, ರಾಷ್ಟ್ರಪತಿ ರಾಮನಾಥ ಕೋವಿಂದ್, ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡ ಪರಿಶಿಷ್ಟ ಸಮುದಾಯದವರೇ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ನುಡಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಭ್ಯರ್ಥಿಯಾಗಿದ್ದ ಡಾ.ಜಿ.ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ತುಳಿದವರು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಅನ್ಯಾಯ ಮಾಡಿದವರು ಈಗ ಬಿಜೆಪಿಗೆ ಬುದ್ಧಿ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದುಳಿದ ವರ್ಗ, ಮೀಸಲಾತಿ, ಅಲ್ಪಸಂಖ್ಯಾತರ ಉದ್ಧಾರ ಇವೆಲ್ಲವೂ ಬರೀ ಕಾಂಗ್ರೆಸ್‍ನವರ ಭಾಷಣದಲ್ಲಿ ಉಳಿದಿದೆ. ಆದರೆ ಬಿಜೆಪಿಗೆ ಭಾಷಣದಲ್ಲಿ ನಂಬಿಕೆ ಇಲ್ಲ. ಹಿಂದುಳಿದವರಿಗೆ ಆದ್ಯತೆ ನೀಡುವುದನ್ನು ನೇರವಾಗಿ, ಪ್ರಾಯೋಗಿಕವಾಗಿ ಮಾಡಿ ತೋರಿಸುತ್ತಿದ್ದೇವೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಸಂಪುಟದ 81 ಸಚಿವರಲ್ಲಿ 45 ಮಂದಿ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ ಎಂದ ಅವರು, ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೂ ನಮಗೆ (ಬಿಜೆಪಿ) ಪೂರ್ಣ ಬಹುಮತ ಬಂದಿರಲಿಲ್ಲ. ಗೊಂದಲದಲ್ಲಿ ಯಾರನ್ನೋ ಕರೆದುಕೊಂಡು ಸರಕಾರ ಮಾಡಿದ್ದೇವೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಬಾರಿ ಪೂರ್ಣ ಬಹುಮತ ದೊರೆತಿದೆ. ಹಾಗಿದ್ದರೂ ದಲಿತರನ್ನು ಏಕೆ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.







