ಕೊರೋನ 3ನೆ ಅಲೆ ತಡೆಗೆ ವಾರಾಂತ್ಯ ಕಫ್ರ್ಯೂ ಜಾರಿಗೆ ಬಿಬಿಎಂಪಿ ಚಿಂತನೆ

ಬೆಂಗಳೂರು, ಆ.1: ರಾಜಧಾನಿಯಲ್ಲಿ ಕೊರೋನ 3ನೆ ಅಲೆಯನ್ನು ತಡೆಯಲು ಈಗಿನಿಂದಲೇ ತಯಾರಿ ನಡೆಸಿರುವ ಬಿಬಿಎಂಪಿ ವಾರಾಂತ್ಯ ಕಫ್ರ್ಯೂ ಜಾರಿಗೆ ಗಂಭೀರ ಚಿಂತನೆ ನಡೆಸಿದೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದು, ಅವರು ಒಪ್ಪಿಗೆ ನೀಡಿದರೆ ವಾರಾಂತ್ಯ ಕಫ್ರ್ಯೂ ಜಾರಿಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಸೋಂಕು ಹೆಚ್ಚಾದರೆ ಸೋಂಕು ತಡೆಗಟ್ಟಲು ವಾರಾಂತ್ಯ ಕಫ್ರ್ಯೂ ಅನಿವಾರ್ಯ. ಹೀಗಾಗಿ, ಮುಂದಿನ ದಿನಗಳಲ್ಲಿ ವಾರಾಂತ್ಯದಲ್ಲಿ ಸಂಜೆ 5 ಗಂಟೆ ನಂತರ ಬೆಳಗ್ಗೆ 6ರವರೆಗೂ ಕಫ್ರ್ಯೂ ಜಾರಿ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತಾ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ವಾರಾಂತ್ಯದಲ್ಲಿ ಬೆಂಗಳೂರಿನ ನಾಗರಿಕರ ಪಾರ್ಟಿ, ಔತಣಕೂಟವೆಂದು ಸೇರುವ ಪರಿಪಾಠ ಮುಂದುವರೆದಿದ್ದು, ಇದಕ್ಕೆಲ್ಲ ಕಡಿವಾಣ ಹಾಕಲು ವಾರಾಂತ್ಯ ಕಫ್ರ್ಯೂ ಜಾರಿಗೆ ಬಿಬಿಎಂಪಿ ಆಯುಕ್ತರು ತೀರ್ಮಾನಿಸಿದ್ದು, ಅದರಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅವರ ಒಪ್ಪಿಗೆ ಪಡೆದು ಈ ಸಂಬಂಧ ಆದೇಶ ಹೊರಡಿಸುವ ಸಾಧ್ಯತೆಗಳಿವೆ.
ಬೆಂಗಳೂರಿನಲ್ಲಿ ಕೊರೋನ ತಡೆಯಲು ಯಾವುದೇ ರೀತಿಯ ನಿರ್ಬಂಧಗಳನ್ನು ಜಾರಿ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ. ಅದರಂತೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಾರಾಂತ್ಯ ಕಫ್ರ್ಯೂ ಜಾರಿ ಬಗ್ಗೆ ತೀರ್ಮಾನ ಪ್ರಕಟಿಸುವ ಸಾಧ್ಯತೆಗಳಿವೆ.







