ತಂದೆಯ ಸಲಹೆ, ಮಾರ್ಗದರ್ಶನ ದೇಶ ಸೇವೆಗೆ ಪ್ರೇರಣೆ: ಲೆಫ್ಟಿನೆಂಟ್ ಅಧಿಕಾರಿ ಹಾಫಿಝ್ ಕೆ.ಎ

ಪುತ್ತೂರು: ಸರ್ಕಾರಿ ಅಧಿಕಾರಿಯಾಗಿದ್ದ ನನ್ನ ತಂದೆಯವರು ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದರು. ಇಂದು ನಾನು ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಆಗಲು ಅವರ ಸಲಹೆ, ಮಾರ್ಗದರ್ಶನ ಹಾಗೂ ಪರಿಶ್ರಮವೇ ಪ್ರೇರಣೆ ಎಂದು ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಆಗಿರುವ ಪುತ್ತೂರು ತಾಲೂಕಿನ ನಗರಸಭಾ ವ್ಯಾಪ್ತಿಯ ನಂದಿಲ ಹಾರಾಡಿ ನಿವಾಸಿ ಹಾಫಿಝ್ ಕೆ. ಎ ತಿಳಿಸಿದರು.
ಅವರು ರವಿವಾರ ಪುತ್ತೂರು ಕಮ್ಯುನಿಟಿ ಸೆಂಟರ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾ ಮಾತುಗಳನ್ನಾಡಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಮ್ಯುನಿಟಿ ಸೆಂಟರ್ ವತಿಯಿಂದ ನೀಡಲಾದ ಸನ್ಮಾನ, ಗೌರವ ಸ್ವೀಕರಿಸಿ ಮಾತನಾಡಿದರು.
ಪುತ್ತೂರು ಕಮ್ಯುನಿಟಿ ಸೆಂಟರ್ ಹಾಫಿಝ್ ರಂತೆ ನಾಡಿನ ಯುವ ಸಮೂಹ ಸಾಧನೆ ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಸೇವೆ ನೀಡುತ್ತಿದೆ. ಸಂಸ್ಥೆಯ ಕಾರ್ಯ ಚಟುವಟಿಕೆ ವೀಕ್ಷಿಸಿದ ಅವರು, ನನಗೆ ಸರಿಯಾದ ದಾರಿ ತೋರಿಸಲು ತಂದೆಯವರಿದ್ದರು. ಆದರೆ, 90% ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಿಲ್ಲ. ಆಯ್ಕೆಯಲ್ಲಿ ಎಡವುತ್ತಲೂ ಇದ್ದಾರೆ. ಹತ್ತನೇ ತರಗತಿಯಲ್ಲಿ ವಿಧ್ಯಾರ್ಥಿಗಳು ಗುರಿ ನಿಶ್ಚಯಿಸಬೇಕು, ಅದಕ್ಕೆ ಕ್ಯಾರಿಯರ್ ಗೋಲ್ ಸೆಟ್ಟ್ ಮಾಡಲು ಸಂಸ್ಥೆಯ ಎಕ್ಸ್ ಪರ್ಟ್ ಗಳು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು.
ಇದು ಯಾವಾಗಲೋ ಆಗಬೇಕಿತ್ತು. ತಡವಾಗಿಯಾದರೂ ಆಗಿದೆ ಎನ್ನುವ ಅಭಿಮಾನದಿಂದ ಇಲ್ಲಿಗೆ ಬಂದಿದ್ದೇನೆ. ದೇಶ ಸೇವೆ ಮಾಡುವ ಉತ್ಸಾಹ - ತುಡಿತ ಇರುವ ನನ್ನಂತ ಯುವಕರು ತುಂಬಾ ಇದ್ದಾರೆ. ಅವರಿಗೆ ಕೋರ್ಸ್ ಯಾವುದು ? ಎಕ್ಸಾಮ್ ಯಾವುದು ? ಎಕ್ಸಾಮ್ ಸೆಂಟರ್ ಎಲ್ಲಿದೆ ? ಅದಕ್ಕೆ ಅಪ್ಲೈ ಮಾಡುವುದು ಹೇಗೆ ? ಅದರ ನಿಯಮ ಏನು ? ಇದು ಯಾವುದೂ ಗೊತ್ತಿಲ್ಲ. ಹೆಚ್ಚಿನವರು ಡಾಕ್ಟರ್, ಇಂಜಿನಿಯರ್, ಶಿಕ್ಷಕರಾಗಬೇಕು ಎಂದು ಕಾಮನ್ ಆಗಿ ಹೇಳುತ್ತಾರೆ. ಪ್ರತೀ ವಿದ್ಯಾರ್ಥಿಯ ಜ್ಞಾನ - ಪ್ರತಿಭೆ - ಆಸಕ್ತಿ ಗುರುತಿಸಿ ಅವರನ್ನು ಸರಿಯಾದ ದಾರಿಯಲ್ಲಿ ಪ್ರೋತ್ಸಾಹಿಸಲು ಇಂತಹ ಕಮ್ಯುನಿಟಿ ಸೆಂಟರ್ ರಾಜ್ಯದೆಲ್ಲೆಡೆ ಆಗಬೇಕು ಎಂದರು.
ಹಾಫಿಝ್ ಅವರನ್ನು ಸನ್ಮಾನಿಸಿ ಗೌರವಿಸಿದ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಮಾನತಾಡಿ ವಿದ್ಯಾರ್ಥಿ ಜೀವನದಲ್ಲಿ ಹೆತ್ತವರ ಪಾತ್ರ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಹೆತ್ತವರು, ಮಕ್ಕಳನ್ನು ಅಭಿಮಾನ ಪಡುವಂತೆ ಬೆಳೆಸಬೇಕು. ದೇಶ ಸೇವೆ ಮಾಡುವ, ಸಮಾಜಮುಖಿಯಾದ ಮತ್ತು ಜನರ ಪ್ರೀತಿ ಗಳಿಸುವ ಯುವತ್ವ ಶ್ರೇಷ್ಠವಾದದ್ದು, ಈ ನಿಟ್ಟಿನಲ್ಲಿ ಹಾಫಿಝ್ ರವರು ಎಲ್ಲಾ ಯುವಕರಿಗೂ ಸ್ಪೂರ್ತಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಾಫಿಝ್ ಅವರ ತಂದೆ ನಿವೃತ್ತ ಹಿರಿಯ ಆರೋಗ್ಯಾಧಿಕಾರಿ ಅಬೂಬಕ್ಕರ್, ಪುತ್ತೂರು ಕಮ್ಯುನಿಟಿ ಸೆಂಟರ್ ನ ಇಮ್ತಿಯಾಝ್ ಪಾರ್ಲೆ, ಶೈಕ್ಷಣಿಕ ಮಾರ್ಗದರ್ಶಕ ರಫೀಕ್ ಮಾಸ್ಟರ್, ಅಲ್ಪಸಂಖ್ಯಾತ ಇಲಾಖೆಯ ನಝೀರ್, ಕಮ್ಯುನಿಟಿ ಸೆಂಟರ್ ನ ನವಾಝ್ ಉಪಸ್ಥಿತರಿದ್ದರು.







