ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪ್ರಾಂತೀಯ ಸ್ಥಾನಮಾನ: ಕಾನೂನಿಗೆ ಅಂತಿಮ ರೂಪ ನೀಡಿದ ಪಾಕ್
ಇಸ್ಲಾಮಬಾದ್,ಆ.2: ಭಾರತದ ಪ್ರಬಲ ಆಕ್ಷೇಪದ ನಡುವೆಯೂ ಪಾಕಿಸ್ತಾನವಾಗಿ ಆಯಕಟ್ಟಿನ ಪ್ರದೇಶವಾದ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ತಾತ್ಕಾಲಿಕವಾಗಿ ಪ್ರಾಂತೀಯ ಸ್ಥಾನಮಾನವನ್ನು ನೀಡುವ ಕಾನೂನನ್ನು ಅಂತಿಮಗೊಳಿಸಿದೆ.
ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನದ ಪ್ರದೇಶಗಳು ಸೇರಿದಂತೆ ಜಮ್ಮುಕಾಶ್ಮೀರ ಹಾಗೂ ಲಡಾಕ್ ನ ಅವಿಭಾಜ್ಯ ಅಂಗವೆಂದು ಭಾರತವು ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ತಿಳಿಸುತ್ತಾ ಬಂದಿದೆ.
ಪಾಕಿಸ್ತಾನವು ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನವನ್ನು ಬಲವಂತದಿಂದ ಸ್ವಾಧೀನಪಡಿಸಿಕೊಂಡಿದ್ದು, ಆ ಪ್ರದೇಶದ ಮೇಲೆ ಪಾಕ್ ಗಾಗಲೀ ಅಥವಾ ಅದರ ನ್ಯಾಯಾಂಗಕ್ಕಾಗಲಿ ಯಾವುದೇ ಹಕ್ಕು ಇರುವುದಿಲ್ಲವೆಂದು ಭಾರತ ಪ್ರತಿಪಾದಿಸುತ್ತಿದೆ.
ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪ್ರಾಂತೀಯ ಸ್ಥಾನಮಾನವನ್ನು ನೀಡಲಾಗಿರುವುದರಿಂದ ಅಲ್ಲಿನ ಸುಪ್ರೀಂ ಮೇಲ್ಮನವಿ ನ್ಯಾಯಾಲಯವನ್ನು ರದ್ದುಪಡಿಸಲಾಗುವುದು ಹಾಗೂ ಆ ಪ್ರದೇಶದ ಚುನಾವಣಾ ಆಯೋಗವನ್ನು, ಪಾಕ್ ಚುನಾವಣಾ ಆಯೋಗದ ಜೊತೆ ವಿಲೀನಗೊಳಿಸುವ ಸಾಧ್ಯತೆಯಿದೆಯೆಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪ್ರಾದೇಶಿಕ ಸ್ಥಾನಮಾನ ನೀಡುವ 26ನೇ ಸಂವಿಧಾನ ತಿದ್ದುಪಡಿ ವಿಧೇಯಕದ ಕರಡನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಸಲ್ಲಿಸಲಾಗಿದೆಯೆಂದು ಅವರು ಹೇಳಿದ್ದಾರೆ.







